September 29, 2026

ಸೌಜನ್ಯ ಪ್ರಕರಣ: ಎಸ್ಐಟಿ ಬಗ್ಗೆ ಸಂಶಯವಿದೆ:  ಕಲ್ಲಡ್ಕ ಪ್ರಭಾಕರ ಭಟ್

0
image_editor_output_image-2122408750-1790618669812

ಮಂಗಳೂರು: ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ‘ವಿಶೇಷ ತನಿಖಾ ತಂಡ’ (SIT) ರಚಿಸಿರುವುದಕ್ಕೆ ಆರ್‌ಎಸ್‌ಎಸ್ (RSS) ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಮತ್ತು ಸಂಶಯ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಎಸ್ಐಟಿ ರಚನೆಯಾಗಿರುವುದು ಒಳ್ಳೆಯದೇ. ಆದರೆ ಆ ತಂಡದಲ್ಲಿರುವ ಎಲ್ಲಾ ಅಧಿಕಾರಿಗಳು ಪರಿಪೂರ್ಣರಾಗಿದ್ದಾರೆಯೇ ಎಂಬ ಬಗ್ಗೆ ಸಣ್ಣ ಸಂಶಯ ಉಂಟಾಗಿದೆ” ಎಂದು ಹೇಳಿದ್ದಾರೆ.

ತಂಡದ ಬಗ್ಗೆ ವಿವರಣೆ ನೀಡಿದ ಭಟ್, “ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಒಳ್ಳೆಯ ಅಧಿಕಾರಿ. ಅವರು ಯಾವುದೇ ಪ್ರಭಾವಕ್ಕೆ ಒಳಗಾಗದೆ, ಆ ಕಡೆ ಈ ಕಡೆ ಆಗದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಆದರೆ ತಂಡದಲ್ಲಿರುವ ಉಳಿದ ಅಧಿಕಾರಿಗಳ ಬಗ್ಗೆ ನಮಗೆ ಸಂಶಯವಿದೆ. ಮಂಗಳೂರು ಕಮಿಷನರ್ ರೀತಿಯ ಬಲವಾದ ಹಾಗೂ ದಕ್ಷ ಅಧಿಕಾರಿಗಳನ್ನು ಈ ತಂಡಕ್ಕೆ ಸೇರಿಸಿಕೊಳ್ಳಬೇಕಿತ್ತು. ಆಗ ಜನರಿಗೆ ಎಸ್ಐಟಿ ಮೇಲೆ ಸಂಪೂರ್ಣ ವಿಶ್ವಾಸ ಬರುತ್ತಿತ್ತು. ತಂಡದಲ್ಲಿರುವ ಉಳಿದವರು ಎಂಥವರು ಎಂಬುದು ಜನರಿಗೂ ಗೊತ್ತು, ನಿಮಗೂ ಗೊತ್ತಿದೆ” ಎಂದು ಅಧಿಕಾರಿಗಳ ನೇಮಕದ ಬಗ್ಗೆ ಅಸಮಾಧಾನ ಹೊರಹಾಕಿದರು.

“ಕಳೆದ 14 ವರ್ಷಗಳಿಂದ ಸೌಜನ್ಯಳ ಆತ್ಮ ನ್ಯಾಯಕ್ಕಾಗಿ ಅಲೆಯುತ್ತಿದೆ. ಬೇರೆ ಯಾವ ಪ್ರಕರಣವೂ ಈ ಮಟ್ಟಿಗೆ ಎಳೆದಾಡಲ್ಪಟ್ಟಿಲ್ಲ. ಈ ಬಾರಿಯಾದರೂ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ, ಆ ಕಡೆ-ಈ ಕಡೆ ನೋಡದೆ ಸತ್ಯ ಏನೆಂಬುದನ್ನು ಹುಡುಕಿ ನ್ಯಾಯ ಕೊಡುವ ಕೆಲಸ ಮಾಡಲಿ. ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ನಡೆಸಿದರೆ ನೂರಕ್ಕೆ ನೂರು ಸತ್ಯ ಹೊರಬರಲಿದೆ” ಎಂದು ಭಟ್ ವಿನಂತಿಸಿದರು.
ಪ್ರಕರಣದ ತನಿಖಾ ಹಾದಿಯ ಬಗ್ಗೆ ಪ್ರಸ್ತಾಪಿಸಿದ ಅವರು, “ಈ ಬಾರಿ ನ್ಯಾಯಾಲಯವೇ ಅತ್ಯಂತ ಸ್ಪಷ್ಟವಾಗಿ ಹೇಳಿದೆ. ಹಿಂದಿನ ತನಿಖೆಯಲ್ಲಿ ನಿರ್ದೋಷಿ ಎಂದು ಸಾಬೀತಾದ ಸಂತೋಷ್ ರಾವ್‌ನನ್ನು ಮತ್ತೆ ಇದರಲ್ಲಿ ಸೇರಿಸಬೇಡಿ ಹಾಗೂ ಈ ಹಿಂದೆ ತನಿಖೆ ನಡೆಸಿ ಎಡವಟ್ಟು ಮಾಡಿದ ಅಧಿಕಾರಿಗಳನ್ನು ಈ ತಂಡದಿಂದ ದೂರವಿಡಿ ಎಂದು ಸೂಚಿಸಿದೆ. ಅಪರಾಧಿಗಳನ್ನು ಹುಡುಕಿ ಹೊರತೆಗೆಯುವ ತಾಕತ್ತು ನಮ್ಮ ಪೊಲೀಸರಿಗಿದೆ. ಆದರೆ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕಿದೆ” ಎಂದು ಒತ್ತಾಯಿಸಿದರು.

 

Leave a Reply

Your email address will not be published. Required fields are marked *

error: Content is protected !!