September 28, 2026

ಪೆರುವಾಯಿ: ವೀರಯೋಧ ಚಂದ್ರಶೇಖರ ಪೂಜಾರಿ ಕಲ್ಲಡ್ಕ ಅವರಿಗೆ ಹುಟ್ಟೂರ ಸನ್ಮಾನ:ಯಾರನ್ನೂ ವಿರೋಧಿಸಿ ಬದುಕಲು ಧರ್ಮ ಕಲಿಸಿಲ್ಲ. ಎಲ್ಲರನ್ನೂ ಅರ್ಥ ಮಾಡಿಕೊಂಡು ಬದುಕಬೇಕು: ಶ್ರೀಕೃಷ್ಣ ಗುರೂಜಿ

0
image_editor_output_image-1020275885-1790606240750

ವಿಟ್ಲ: ಪೆರುವಾಯಿ ಸಾರ್ವಜನಿಕ ಸನ್ಮಾನ ಸಮಿತಿ ವತಿಯಿಂದ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿ,  ತಾಯ್ನಾಡಿಗೆ ಮರಳಿದ ವೀರಯೋಧ ಚಂದ್ರಶೇಖರ ಪೂಜಾರಿ ಕಲ್ಲಡ್ಕ ಅವರಿಗೆ ಹುಟ್ಟೂರ ಸನ್ಮಾನ ಮತ್ತು ತಿರಂಗಾ ಜಾಥಾ ಕಾರ್ಯಕ್ರಮ ನಡೆಯಿತು.


ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಮಾತನಾಡಿ
ಯಾವುದೇ ಜಾತಿ ಮತ ಬೇಧವಿಲ್ಲದೇ ಎಲ್ಲರೂ ಜೀವನ ನಡೆಸುತ್ತಿದ್ದಾರೆ. ಯಾರನ್ನೂ ವಿರೋಧಿಸಿ ಬದುಕಲು ಧರ್ಮ ಕಲಿಸಿಲ್ಲ. ಎಲ್ಲರನ್ನೂ ಅರ್ಥ ಮಾಡಿಕೊಂಡು ಬದುಕಬೇಕು. ಬದುಕು ಮೂರೇ ದಿನ ಇದರ ನಡುವೆ ಪರ ವಿರೋಧ ಏಕೆ. ಪ್ರತಿಯೊಬ್ಬ ತಾಯಿಯ ಮಗ ದೇಶದ ಸೈನಿಕನಾಗಬೇಕು.ಯೋಧನಾಗುವುದು ದೇಶದ ಎಲ್ಲ ವರ್ಗದ  ಜನರ ರಕ್ಷಣೆಗಾಗಿ ಹೊರತು ಆತನ ಸ್ವಾರ್ಥಕ್ಕಾಗಿ ಅಲ್ಲ ಎಂದರು.

 


ಪೆರುವಾಯಿ ಮುಹಿಯ್ಯುದ್ದೀನ್ ಜುಮಾ ಮಸೀದಿ ಧರ್ಮಗುರು ಜಾಫರ್ ಸ್ವಾದಿಖ್ ಬಾಖವಿ ಅಲ್ ಯಮಾನಿ ಮಾತನಾಡಿ ಯೋಧರು
ಎಲ್ಲವನ್ನು  ಸಮರ್ಪಿಸಿ ನಮಗಾಗಿ ಸೇವೆ ಮಾಡುತ್ತಿದ್ದಾರೆ. ಸೈನಿಕರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಎಲ್ಲರೂ ಜತೆಯಾಗಿ ಕೂಡಿಕೊಂಡು ಬದುಕಿದಾಗ ಜೀವನ ಸಾರ್ಥಕವಾಗುತ್ತದೆ ಎಂದರು.
ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ಸೈಮನ್ ಡಿ ಸೋಜ ಮಾತನಾಡಿ ಇದು ಜಾತಿಯ, ಧರ್ಮದ ಕಾರ್ಯಕ್ರಮವಲ್ಲ. ಇದು ಮಾನವೀಯತೆಯ ಹಬ್ಬವಾಗಿದೆ. ಇಲ್ಲಿ ಸೇರಿರುವುದು ನಮ್ಮ ಭಾರತದ ಮಣ್ಣಿನ ಮಗನನ್ನು ಗೌರವಿಸುವ ಉದ್ದೇಶದಿಂದವಾಗಿದೆ. ಎಂದರು.


ಪೆರುವಾಯಿ ಬದ್ರಿಯಾ ಜುಮಾ ಮಸೀದಿ ಧರ್ಮಗುರು ಶರೀಫ್ ಮದನಿ ಶುಭ ಹಾರೈಸಿದರು.
ಬಳಿಕ ಸಾರ್ವಜಿಕ ಸನ್ಮಾನ ಸಮಿತಿ ವತಿಯಿಂದ ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು. ಬಳಿಕ ಪೆರುವಾಯಿ ಚರ್ಚ್, ವಿವಿಧ ಸಂಘ ಸಂಘ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಈ ಗೌರವ ನನಗೆ ಸಲ್ಲಿದ ಗೌರವಲ್ಲ. ದೇಶದ ಧ್ವಜಕ್ಕೆ, ಪ್ರತಿಯೊಬ್ಬ ಸೈನಿಕನಿಗೂ ಸಲ್ಲುತ್ತದೆ. ದೇಶ ಸೇವೆಗೆ ಹೊರಟಾಗ ಇಲ್ಲಿಯ ಎಲ್ಲಾ ಜನರು ಬೆನ್ನು ತಟ್ಟಿ ಕಳುಹಿಸಿಕೊಟ್ಟಿದ್ದಾರೆ ಎಂದರು.


ಪ್ರಗತಿಪರ ಕೃಷಿಕ ಕೃಷ್ಣ ಪ್ರಸಾದ್ ಕಡೆಂಬಿಲ್ಲ, ಕೊರಗಪ್ಪ ಪೂಜಾರಿ ಬಾಳೆಕಲ್ಲು, ರಾಮಣ್ಣ ಪೂಜಾರಿ ಕಲ್ಲಡ್ಕ, ಯೋಧನ ತಾಯಿ ಸುಂದರಿ, ಧರ್ಮ ಪತ್ನಿ ವಿದ್ಯಾಶ್ರೀ, ಪೆರುವಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಪುಷ್ಪಲತಾ ಎಂ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷೆ ನಫೀಸ ಕೆ, ರಾಜೇಂದ್ರ ರೈ ಪೆರುವಾಯಿ ಗುತ್ತು ಮೊದಲಾದವರು ಉಪಸ್ಥಿತರಿದ್ದರು.


ರಹಿಮಾನ್ ಕಾನ ಸ್ವಾಗತಿಸಿದರು. ನೌಫಲ್ ಕೆಬಿಎಸ್ ಕುಡ್ತಮುಗೇರು ನಿರೂಪಿಸಿದರು. ಜಿ ಎಸ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು.
,,,,,,,,,,

Leave a Reply

Your email address will not be published. Required fields are marked *

error: Content is protected !!