ಮಾಡೂರು ಯುಸುಫ್ ಹತ್ಯೆ ಪ್ರಕರಣ; ಐವರು ಆರೋಪಿಗಳಿಗೆ ಶಿಕ್ಷೆ
ಮಂಗಳೂರು: 2015 ನೇ ಸಾಲಿನಲ್ಲಿ ಮಂಗಳೂರು ಸಬ್ ಜೈಲಿನಲ್ಲಿ ವರದಿಯಾಗಿದ್ದ ಮಾಡೂರು ಯುಸುಫ್ ಎಂಬಾತನ ಹತ್ಯೆ ಪ್ರಕರಣದ ತೀರ್ಪು ಪ್ರಕಟವಾಗಿದ್ದು, ಐವರು ಆರೋಪಿಗಳ ಆರೋಪ ಸಾಬೀತಾಗಿ ಶಿಕ್ಷೆಯಾಗಿದ್ದು, ಐವರನ್ನು ಆರೋಪದಿಂದ ಖುಲಾಸೆಗೊಳಿಸಲಾಗಿದೆ.
ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಸಬ್ ಜೈಲಿನಲ್ಲಿ 2015ರ ನವೆಂಬರ್ 2ರಂದು ಮಾಡೂರು ಯುಸುಫ್ ಎಂಬುವನನ್ನು ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ. 92/2015 ಕಲಂ 143, 144, 147, 148, 353, 427, 302 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಾದ ಲಿತೇಶ್ ಪೂಜಾರಿ, ಶೋಭರಾಜ್, ಯುವರಾಜ್, ಪ್ರದೀಪ್, ಉಮೇಶ್ ಕೊಂಬಾರ್, ಶರಣ್ ಪೂಜಾರಿ, ಮಹೇಶ್ ಕುಮಾರ್, ಕಮಲಾಕ್ಷ ಪೂಜಾರಿ, ಸತೀಶ್ ಪೂಜಾರಿ ಮತ್ತು ಲತೀಶ್ ಎಂಬುವರ ವಿರುದ್ಧ 2016ರ ಜನವರಿ 28 ರಂದು ಪ್ರಕರಣದ ತನಿಖಾಧಿಕಾರಿಯಾದ ತಿಲಕ್ ಚಂದ್ರ ಎ.ಸಿ.ಪಿ ರವರು ಮಾನ್ಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿರುತ್ತಾರೆ.
ಅದರಂತೆ ಮಾನ್ಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಸ್‌ಸಿ ನಂ. 151/2021 ರಂತೆ ವಿಚಾರಣೆ ನಡೆದು, ಸೆ. 28 ರಂದು ಲಿತೇಶ್ ಪೂಜಾರಿ, ಶೋಭರಾಜ್, ಯುವರಾಜ್, ಪ್ರದೀಪ್, ಉಮೇಶ್ ಕೊಂಬಾರ್ ಎಂಬವರ ವಿರುದ್ಧ ಆರೋಪ ಸಾಬೀತಾಗಿ ಶಿಕ್ಷೆ ವಿಧಿಸಲಾಗಿದೆ. ಉಳಿದ ಆರೋಪಿಗಳಾದ ಶರಣ್ ಪೂಜಾರಿ, ಮಹೇಶ್ ಕುಮಾರ್, ಕಮಲಾಕ್ಷ ಪೂಜಾರಿ, ಸತೀಶ್ ಪೂಜಾರಿ, ಲತೀಶ್ ಅವರನ್ನು ಆರೋಪದಿಂದ ಖುಲಾಸೆಗೊಳಿಸಿರುತ್ತದೆ. ಪ್ರಕರಣದಲ್ಲಿ ಶಿಕ್ಷೆಯಾದ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲು ಬಾಕಿ ಇರುತ್ತದೆ.
ಪ್ರಕರಣದಲ್ಲಿ ಮಾನ್ಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ವಾದವನ್ನು ಮೋಹನ್ ಸರ್ಕಾರಿ ಅಭಿಯೋಜರವರು ಮಂಡಿಸಿರುತ್ತಾರೆ.




