ಬಿಹಾರ: ನಕಲಿ ಮಧ್ಯ ಸೇವಿಸಿ 9 ಮಂದಿ ಸಾವು, 7 ಮಂದಿ ಆಸ್ಪತ್ರೆಗೆ ದಾಖಲು
ಬಿಹಾರ: ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ನಕಲಿ ಮಧ್ಯ ಸೇವಿಸಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ನವಾಲ್ ಕಿಶೋರ್ ಚೌಧರಿ ಹೇಳಿದ್ದಾರೆ.
ತೆಲ್ಹುವಾ ಗ್ರಾಮದ ಸಂತ್ರಸ್ತರು ನವೆಂಬರ್ 3 ರಂದು ಸಂಜೆ ಚಮರ್ತೋಲಿ ಪ್ರದೇಶದಲ್ಲಿ ಮದ್ಯ ಸೇವಿಸಿದ್ದಾರೆ ಎಂದು ನಿವಾಸಿಗಳು ಹೇಳಿದ್ದಾರೆ, ಆದರೆ ಪೊಲೀಸರು ಇನ್ನೂ ಅದನ್ನು ಖಚಿತಪಡಿಸಿಲ್ಲ. ಮೃತ ಎಂಟು ಮಂದಿಯನ್ನು ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಉಪೇಂದ್ರ ನಾಥ್ ವರ್ಮಾ, ಇದೊಂದು ಅಸಹಜ ಸಾವಿನ ಪ್ರಕರಣವಾಗಿದ್ದು, ಪ್ರಾಥಮಿಕ ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದರು. ಪ್ರಕರಣದ ವಿವರಗಳನ್ನು ತಿಳಿಯಲು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಮತ್ತು ಪೊಲೀಸರು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಗ್ರಾಮಸ್ಥರೊಬ್ಬರು, ಮದ್ಯವನ್ನು ಸೇವಿಸಿದ ನಂತರ ಜನರು ಅಸ್ವಸ್ಥತೆಯ ಬಗ್ಗೆ ದೂರು ನೀಡಲು ಪ್ರಾರಂಭಿಸಿದರು ಮತ್ತು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಂದು ಬೆಳಗ್ಗೆ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಇನ್ನುಳಿದವರು ಪ್ರಸ್ತುತ ವಿವಿಧ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ತಿಂಗಳು, ಮುಜಾಫರ್‌ಪುರದಲ್ಲಿ ಇದೇ ರೀತಿಯ ಘಟನೆಯಲ್ಲಿ ಎಂಟು ಜನರು ಸಾವನ್ನಪ್ಪಿದ್ದರು.
ನಿತೀಶ್ ಕುಮಾರ್ ಸರ್ಕಾರವು ಏಪ್ರಿಲ್ 5, 2016 ರಂದು ರಾಜ್ಯದಲ್ಲಿ ಮದ್ಯದ ತಯಾರಿಕೆ, ವ್ಯಾಪಾರ, ಸಂಗ್ರಹಣೆ, ಸಾಗಣೆ, ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿತು.





