ನಿರ್ಮಾಣ ಹಂತದ ಕಟ್ಟಡ ಕುಸಿತ:
ಮೂವರು ಮೃತ್ಯು, ಆರು ಜನರಿಗೆ ಗಾಯ
ದಾವಣಗೆರೆ: ನಿರ್ಮಾಣ ಹಂತದ ಕಟ್ಟಡದ ಪಿಲ್ಲರ್ ಕುಸಿದು ಮೂವರು ಸಾವನ್ನಪ್ಪಿದ ದುರ್ಘಟನೆ ದಾವಣಗೆರೆ ಬಳಿಯ ಕುಕ್ಕವಾಡ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದೆ.
ಶಾಮನೂರು ಶಿವಶಂಕರಪ್ಪ ಕುಟುಂಬದ ಒಡೆತನದ ಕಾರ್ಖಾನೆಯಲ್ಲಿ ಘಟನೆ ಸಂಭವಿಸಿದೆ. ಎಥನಾಲ್ ಘಟಕಕ್ಕೆ ನಿರ್ಮಿಸುತ್ತಿದ್ದ ಕಟ್ಟಡದ ಪಿಲ್ಲರ್ ಕುಸಿತಗೊಂಡಿದೆ. ಈ ದುರ್ಘಟನೆಯಲ್ಲಿ 6 ಜನರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೊಪ್ಪಳ, ರಾಯಚೂರು ಮೂಲದ ಮೂವರು ಕಾರ್ಮಿಕರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಮಾನಪ್ಪ (35), ಬಸಪ್ಪ (40), ಮಜೀದ್ (22) ಮೃತ ದುರ್ದೈವಿಗಳು. ರಾಯಚೂರು ಮೂಲದ ಅಂಬರೀಶ್, ರಮೇಶ್, ಸಂತೋಷ್, ಕೋಲ್ಕತ್ತಾದ ಮಿಲನ್ ಸ್ಥಿತಿ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಾಮನೂರು ಶಿವಶಂಕರಪ್ಪನವರ ಹಿರಿಯ ಪುತ್ರ ಎಸ್.ಎಸ್. ಗಣೇಶ್ಗೆ ಸೇರಿದ ಸಕ್ಕರೆ ಕಾರ್ಖಾನೆ ಕಟ್ಟಡ ಇದಾಗಿದೆ.





