ಚಿನ್ನ ಕಳ್ಳ ಸಾಗಣೆ ಪ್ರಕರಣ:
ಸ್ವಪ್ನಾ ಸುರೇಶ್ ಸೇರಿದಂತೆ ಎಂಟು ಮಂದಿಗೆ ಜಾಮೀನು ಮಂಜೂರು
ಕೇರಳ: ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ಸ್ವಪ್ನಾ ಸುರೇಶ್ ಸೇರಿದಂತೆ ಎಂಟು ಮಂದಿಗೆ ಮಂಗಳವಾರ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಸ್ವಪ್ನಾ ಸುರೇಶ್, ಮೊಹಮ್ಮದ್ ಶಫಿ ಪಿ, ಜಲಾಲ್ ಎ ಎಂ, ರಾಬಿನ್ಸ್ ಹಮೀದ್, ರಮೀಸ್ ಕೆ ಟಿ, ಶರಾಫುದ್ದೀನ್ ಕೆ ಟಿ, ಮೊಹಮ್ಮದ್ ಅಲಿ ಮತ್ತು ಸರಿತಾ ಪಿ ಎಸ್ ಅವರು ಸಲ್ಲಿಸಿದ್ದ ಮನವಿಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಸಿ ಜಯಚಂದ್ರನ್ ಅವರು ಆದೇಶ ಮಾಡಿದ್ದಾರೆ. ಜಾಮೀನು ಹಿನ್ನೆಲೆಯಲ್ಲಿ ಸ್ವಪ್ನಾ ಸುರೇಶ್ ಜೈಲಿನಿಂದ ಹೊರಬರಲಿದ್ದಾರೆ.
ಹವಾಲಾ ಹಣ, ಕಾನೂನುಬಾಹಿರ ಹಣಕಾಸು ವರ್ಗಾವಣೆ ಮತ್ತು ರಾಯಭಾರಿ ಮಾರ್ಗಗಳ ಮೂಲಕ ಭಾರಿ ಚಿನ್ನ ಕಳ್ಳ ಸಾಗಣೆಗೆ ಸಂಬಂಧಿಸಿದಂತೆ ಸ್ವಪ್ನಾ ಸುರೇಶ್ ಅವರನ್ನು ಬಂಧಿಸಿ ಕೇರಳದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಆ ಬಳಿಕ ಎನ್‌ಐಎ 20 ಆರೋಪಿಗಳ ವಿರುದ್ಧ ಯುಎಪಿಎಯ ವಿವಿಧ ಸೆಕ್ಷನ್‌ಗಳ ಅಡಿ ಆರೋಪ ಪಟ್ಟಿ ಸಲ್ಲಿಸಿತ್ತು. ಮಾರ್ಚ್ 22ರಂದು ಎನ್‌ಐಎ ವಿಶೇಷ ನ್ಯಾಯಾಲಯವು ಆರೋಪಿಗಳ ಜಾಮೀನು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
“ನ್ಯಾಯಮೂರ್ತಿಗಳಾದ ಹರಿಪ್ರಸಾದ್ ಮತ್ತು ಅನಿತಾ ಹೇಳಿರುವುದು ಸರಿಯಿದೆ ಎಂದು ನಮಗನ್ನಿಸುತ್ತದೆ. ಕಳ್ಳಸಾಗಣೆಯ ಮೂಲಕ ಅವರು ಗಳಿಸಿದ ಲಾಭವನ್ನು ಕೆಲವು ಭಯೋತ್ಪಾದಕ ಸಂಘಟನೆಗಳಿಗೆ ರವಾನಿಸಲಾಗಿದೆ ಎಂಬ ಆಪಾದನೆ ಮೇಲ್ನೋಟಕ್ಕೆ ನಿಜ ಎಂದು ಹೇಳಲು ಅದನ್ನು ನಮಗೆ ಮನವರಿಕೆ ಮಾಡಿಕೊಡಬೇಕು. ಇಲ್ಲವಾದರೆ, ಇದು ಪ್ರಾಥಮಿಕವಾಗಿ ನಿಜವೆಂದು ಕಂಡುಕೊಳ್ಳುವ ಪ್ರಶ್ನೆಯೇ ಇಲ್ಲ ಮತ್ತು ನಿಮ್ಮನ್ನು (ಆರೋಪಿಗಳನ್ನು) ಬಿಡುಗಡೆ ಮಾಡಲಾಗುವುದು” ಎಂದು ನ್ಯಾಯಾಲಯ ಹೇಳಿದೆ.
ವಿಶೇಷ ನ್ಯಾಯಾಲಯದ ಆದೇಶ ಮತ್ತು ವಿದೇಶ ವರ್ಗಾವಣೆ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಸಿಒಎಫ್‌ಇಪಿಒಎಸ್‌ಎ) ಅಡಿ ಮುಂಜಾಗ್ರತವಾಗಿ ಬಂಧಿಸಿರುವುದನ್ನು ಪ್ರಶ್ನಿಸಿ ಸ್ವಪ್ನಾ ಸುರೇಶ್ ಜುಲೈನಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯವು ಸಿಒಎಫ್‌ಇಪಿಒಎಸ್‌ಎ ಅಡಿ ಬಂಧನ ಆದೇಶವನ್ನು ವಜಾ ಮಾಡಿದ್ದು, ಎನ್‌ಐಎ ಪ್ರಕರಣದ ಹಿನ್ನೆಲೆಯಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗಿರಲಿಲ್ಲ. ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯ, ಎನ್‌ಐಎ ಮತ್ತು ಕಸ್ಟಮ್ ಇಲಾಖೆ ತನಿಖೆ ಮುಂದುವರಿಸಿವೆ.