ಐಸಿಸಿ ಟ್ವೆಂಟಿ-20 ವಿಶ್ವಕಪ್:
ಶ್ರೀಲಂಕ ವಿರುದ್ಧ ಇಂಗ್ಲೇಂಡ್ ಗೆ 26 ರನ್ ಗಳ ಜಯ; ಬಟ್ಲರ್ ಭರ್ಜರಿ ಶತಕ
ಶಾರ್ಜಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಜೋಸ್ ಬಟ್ಲರ್ ಅಮೋಘ ಶತಕದ (101*) ನೆರವಿನಿಂದ ಇಂಗ್ಲೆಂಡ್ ತಂಡವು, ಸೋಮವಾರ ಶ್ರೀಲಂಕಾ ವಿರುದ್ಧ ನಡೆದ ಸೂಪರ್-12 ಹಂತದ ಒಂದನೇ ಗುಂಪಿನ ಪಂದ್ಯದಲ್ಲಿ 26 ರನ್ ಅಂತರದ ಗೆಲುವು ದಾಖಲಿಸಿದೆ.
ಈ ಮೂಲಕ ಸತತ ನಾಲ್ಕನೇ ಗೆಲುವು ದಾಖಲಿಸಿರುವ ಆಂಗ್ಲರ ಪಡೆ ಅಜೇಯ ಓಟ ಮುಂದುವರಿಸಿದ್ದು, ಒಟ್ಟು ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಅಲ್ಲದೆ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿದೆ. ಅತ್ತ ಲಂಕಾ ಅಷ್ಟೇ ಪಂದ್ಯಗಳಲ್ಲಿ ಒಂದು ಗೆಲುವಿನೊಂದಿಗೆ ಎರಡು ಅಂಕ ಮಾತ್ರ ಹೊಂದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಇಂಗ್ಲೆಂಡ್ ಆರಂಭ ಉತ್ತಮವಾಗಿರಲಿಲ್ಲ. ತಂಡವು 35 ರನ್ ಗಳಿಸುವುದರೆಡೆ ಜೇಸನ್ ರಾಯ್ (9), ಡೇವಿಡ್ ಮಲಾನ್ (6) ಹಾಗೂ ಜಾನಿ ಬೆಸ್ಟೊ (0) ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಆದರೆ ನಾಲ್ಕನೇ ವಿಕೆಟ್‌ಗೆ 112 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದ ಬಟ್ಲರ್ ಹಾಗೂ ನಾಯಕ ಏಯಾನ್ ಮಾರ್ಗನ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು. 40 ಎಸೆತಗಳನ್ನು ಎದುರಿಸಿದ ಮಾರ್ಗನ್ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 40 ರನ್ ಗಳಿಸಿದರು.
ಇನ್ನಿಂಗ್ಸ್‌ನ ಕೊನೆಯ ಎಸೆತವನ್ನು ಸಿಕ್ಸರ್‌ಗಟ್ಟಿದ ಬಟ್ಲರ್ ಅಮೋಘ ಶತಕ ಸಾಧನೆ ಮಾಡಿದರು. ಅಲ್ಲದೆ ಇಂಗ್ಲೆಂಡ್ ಪರ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಶತಕ ಗಳಿಸಿದ ಮೊತ್ತ ಮೊದಲ ಬ್ಯಾಟರ್ ಎನಿಸಿದರು. ಪ್ರಸಕ್ತ ಸಾಲಿನ ಟ್ವೆಂಟಿ-20 ವಿಶ್ವಕಪ್‌ನಲ್ಲಿ ದಾಖಲಾದ ಮೊದಲ ಶತಕವೂ ಇದಾಗಿದೆ.
ಈ ಮೂಲಕ ಆಂಗ್ಲರ ಪಡೆ ನಾಲ್ಕು ವಿಕೆಟ್ ನಷ್ಟಕ್ಕೆ 163 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. 67 ಎಸೆತಗಳನ್ನು ಎದುರಿಸಿದ ಬಟ್ಲರ್ ತಲಾ ಆರು ಭರ್ಜರಿ ಸಿಕ್ಸರ್ ಹಾಗೂ ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿ ಅಜೇಯರಾಗುಳಿದರು. ಲಂಕಾ ಪರ ವನಿಂದು ಹಸರಂಗ ಮೂರು ವಿಕೆಟ್ ಕಬಳಿಸಿದರು.
ಬಳಿಕ ಗುರಿ ಬೆನ್ನತ್ತಿದ ಲಂಕಾ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಹಿನ್ನಡೆಗೊಳಗಾಯಿತು. ಒಂದು ಹಂತದಲ್ಲಿ 76ಕ್ಕೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಕೊನೆಯ ಹಂತದಲ್ಲಿ ವನಿಂದು ಹಸರಂಗ (34) ಹಾಗೂ ನಾಯಕ ದಸುನ್ ಶನಕ (26) ದಿಟ್ಟ ಹೋರಾಟ ತೋರಿದರು.





