November 22, 2024

ಇಂದು ಹಾನಗಲ್ ಉಪಚುನಾವಣೆ ಮತ ಎಣಿಕೆ:
ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ 13 ಅಭ್ಯರ್ಥಿಗಳು ಕಣದಲ್ಲಿ

0

ಬೆಂಗಳೂರು: ಬಿಜೆಪಿ–ಕಾಂಗ್ರೆಸ್‌ ನಡುವಿನ ತೀವ್ರ ಜಿದ್ದಾಜಿದ್ದಿ ಕಣವಾದ ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನ.2ರಂದು ಇಂದು ನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬೆಳಿಗ್ಗೆ 8ಕ್ಕೆ ಆರಂಭವಾಗಲಿದೆ.

ಶಾಸಕರಾಗಿದ್ದ ಸಿ.ಎಂ.ಉದಾಸಿ ನಿಧನರಾದ ಹಿನ್ನೆಲೆಯಲ್ಲಿ ಹಾನಗಲ್‌ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿದೆ. ಈಗ ಎಲ್ಲರ ಚಿತ್ತ ಮತ ಎಣಿಕೆಯತ್ತ ನೆಟ್ಟಿದೆ. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ, ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ, ಜೆಡಿಎಸ್‌ ಅಭ್ಯರ್ಥಿ ನಿಯಾಜ್‌ ಶೇಖ್‌ ಸೇರಿದಂತೆ 13 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.

ಮತ ಎಣಿಕೆ ಪ್ರಕ್ರಿಯೆ ಪೂರ್ವ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಬೆಳಿಗ್ಗೆ 7.30ಕ್ಕೆ ಸ್ಟ್ರಾಂಗ್ ರೂಂ ತೆರೆಯಲಾಗುವುದು. ಬೆಳಿಗ್ಗೆ 7.45ಕ್ಕೆ ಅಂಚೆ ಮತಗಳ ಎಣಿಕೆ ಕಾರ್ಯ ಆರಂಭಿಸಲಾಗುವುದು. ಬೆಳಿಗ್ಗೆ 8 ಗಂಟೆಗೆ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಕಾರ್ಯ ಆರಂಭಿಸಲಾಗುವುದು. ಅಂಚೆ ಮತದಾನ ಎಣಿಕೆಗೆ ಒಂದು ಕೊಠಡಿ ಹಾಗೂ ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತ ಎಣಿಕೆಗೆ ಎರಡು ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ ತಲಾ 7 ಎಣಿಕೆ ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಶೇ 83.76ರಷ್ಟು ಮತ:
ಅಕ್ಟೋಬರ್ 30 ರಂದು ನಡೆದ ಮತದಾನದಲ್ಲಿ ಒಟ್ಟಾರೆ 2,04,481 ಮತದಾರರ ಪೈಕಿ 1,71,264 ಜನರು ಮತ ಚಲಾಯಿಸಿದ್ದಾರೆ. ಶೇ 83.76ರಷ್ಟು ಮತ ಚಲಾವಣೆಯಾಗಿದೆ. 463 ಅಂಚೆ ಮತ ಚಲಾವಣೆ ಹಾಗೂ 12 ಸೇವಾ ಮತಗಳು ಚಲಾವಣೆಯಾಗಿವೆ. 263 ಮತಗಟ್ಟೆಗಳ ಪೈಕಿ ಗಡಿಯಂಕನಹಳ್ಳಿಯ 140ರ ಮತಗಟ್ಟೆ ಸಂಖ್ಯೆಯಲ್ಲಿ ಅತಿ ಹೆಚ್ಚು ಶೇ 95.11ರಷ್ಟು ಮತದಾನವಾಗಿದೆ ಹಾಗೂ ಹಾನಗಲ್‌ ನಗರದ 103ರ ಮತಗಟ್ಟೆ ಸಂಖ್ಯೆಯಲ್ಲಿ ಶೇ 66.61ರಷ್ಟು ಕಡಿಮೆ ಮತದಾನವಾಗಿದೆ.

ಎಣಿಕೆ ಕೊಠಡಿ:
ಮತ ಎಣಿಕೆಗೆ 2 ಕೊಠಡಿಗಳು ಸಿದ್ಧ ಮಾಡಲಾಗಿದೆ. ಅಂಚೆ ಮತಪತ್ರ ಹಾಗೂ ಇಟಿಪಿಬಿಎಸ್‌ ಎಣಿಕೆ ಸಲುವಾಗಿ ಪ್ರತ್ಯೇಕ ಕೊಠಡಿ ನಿಗದಿಪಡಿಸಲಾಗಿದೆ. ಪ್ರತಿ ಕೊಠಡಿಯಲ್ಲಿ ತಲಾ 7 ಟೇಬಲ್ ಸೇರಿ ಒಟ್ಟು 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ ತಲಾ ಒಬ್ಬರು ಮೈಕ್ರೋ ಅಬ್ಸರ್ವರ್, ಒಬ್ಬರು ಎಣಿಕೆ ಮೇಲ್ವಿಚಾರಕ ಒಬ್ಬರು ಎಣಿಕೆ ಸಹಾಯಕರ ನೇಮಕ ಮಾಡಿದೆ ಎಂದು ತಿಳಿಸಿದರು.

ಒಟ್ಟು 14 ಟೇಬಲ್‍ಗಳಲ್ಲಿ 18 ಪೂರ್ಣ ರೌಂಡ್ ಮತ್ತು 19ನೇ ರೌಂಡ್‍ನಲ್ಲಿ ಮತ ಎಣಿಕೆ ಮುಕ್ತಾಯವಾಗಲಿದೆ. ಅಂಚೆ ಮತ ಪತ್ರ ಹಾಗೂ ETPBS ಅಂಚೆ ಮತ ಪತ್ರಗಳ ಎಣಿಕೆ ಕಾರ್ಯವು ಚುನಾವಣಾಧಿಕಾರಿಗಳ ಸಮಕ್ಷಮ ನಡೆಯಲಿದೆ ಎಂದು ತಿಳಿಸಿದರು.

ರೌಂಡ್‍ವಾರು ಮಾಹಿತಿ:
ಪ್ರತಿ ರೌಂಡ್‍ವಾರು ಮತ ಗಳಿಕೆಯ ವಿವರವನ್ನು ಚುನಾವಣಾಧಿಕಾರಿಗಳು ಮತ್ತು ಚುನಾವಣಾ ಸಾಮಾನ್ಯ ವೀಕ್ಷಕರು ಪರಿಶೀಲಿಸಿ ಖಾತರಿಯಾದ ನಂತರ ಆಯಾ ಎಣಿಕೆ ಕೊಠಡಿಯಲ್ಲಿ ಮತ್ತು ಸಾರ್ವಜನಿಕರಿಗೆ ಪ್ರಚುರಪಡಿಸಲಾಗುವುದು. ಎನ್.ಐ.ಸಿ ಮೂಲಕ ತಂತ್ರಾಂಶದಲ್ಲಿ ಅಪಲೋಡ್ ಮಾಡಲಾಗುವುದು.

ಕಂಟ್ರೋಲ್ ರೂಂ:
ಮತ ಎಣಿಕೆ ಕೇಂದ್ರದಲ್ಲಿ 24X3 ದಿನ ಅವಧಿಗೆ ಕಂಟ್ರೋಲ್ ರೂಂ ಅನ್ನು ಆರಂಭಿಸಿದೆ. 3 ಪಾಳಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮತ ಎಣಿಕೆ ಕೇಂದ್ರಕ್ಕೆ ನಿಯೋಜಿಸಲಾಗಿದೆ.

ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್‌ ನಿಷೇಧ:
ಎಣಿಕೆ ಕೇಂದ್ರದಲ್ಲಿ ಮೊಬೈಲ್ ದೂರವಾಣಿಗಳು, ಎಲೆ ಅಡಿಕೆ, ಗುಟ್ಕಾ, ಬೀಡಿ-ಸಿಗರೇಟ್‌, ಪಾನ್ ಮಸಾಲಾ, ತಿಂಡಿ ತಿನಿಸುಗಳು, ಕುಡಿಯುವ ನೀರು ಮತ್ತು ಶಸ್ತ್ರಾಸ್ತ್ರ ಮುಂತಾದವುಗಳಿಗೆ ಪ್ರವೇಶವಿಲ್ಲ. ಚಾಕು, ಕತ್ತರಿ, ಕಡ್ಡಿಪೆಟ್ಟಿಗೆ ಮತ್ತು ಅಗ್ನಿ ಅವಘಡಕ್ಕೆ ಆಹ್ವಾನ ನೀಡುವ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ 144 ಸೆಕ್ಷನ್‌ ಜಾರಿ:
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಈಗಾಗಲೇ ಜಿಲ್ಲೆಯಾದ್ಯಂತ 144 ಕಲಂ ಜಾರಿಗೊಳಿಸಲಾಗಿದೆ. ಮದ್ಯ ಮಾರಾಟ ನಿಷೇಧಿಸಲಾಗಿದೆ. ಹಾನಗಲ್, ಹಾವೇರಿ, ದೇವಗಿರಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ವಿಶೇಷ ಪೊಲೀಸ್ ಭದ್ರತೆ ಹಾಕಲಾಗಿದೆ. ವಿಜಯೋತ್ಸವ, ಮೆರವಣಿಗೆ ನಿಷೇಧಿಸಲಾಗಿದೆ. ಜಿಲ್ಲೆಯಾದ್ಯಂತ ನ.5ರವರೆಗೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!