ಕಾಸರಗೋಡು ಗಡಿಯಲ್ಲಿ ಕರ್ನಾಟಕ ವಿಧಿಸಿದ ನಿರ್ಬಂಧ ವಿರುದ್ಧ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ಕೇರಳದ ಕಾಸರಗೋಡಿನವರು ಮಂಗಳೂರಿನ ಗಡಿಯೊಳಗೆ ಬರಲು ಆರ್‌ಟಿ-ಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ಕರ್ನಾಟಕ ಸರ್ಕಾರ ಆದೇಶ ನೀಡಿತ್ತು. ಕೊವಿಡ್ ನೆಗೆಟಿವ್ ವರದಿ ಇರುವವರಿಗೆ ಮಾತ್ರ ಕರ್ನಾಟಕದ ಗಡಿ ಪ್ರವೇಶಿಸಲು ನಿರ್ಬಂಧ ಹೇರಿರುವುದನ್ನು ಪ್ರಶ್ನಿಸಿ ಕೇರಳದ ಶಾಸಕ ಎಕೆಎಂ ಅಶ್ರಫ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಬಿ.ಆರ್. ಗವಾಯಿ ಅವರ ನ್ಯಾಯಪೀಠವು ದೇಶದಲ್ಲಿ ಕೊವಿಡ್ ಇನ್ನೂ ಕೊನೆಗೊಂಡಿಲ್ಲ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕ ಸರ್ಕಾರ ವಿಧಿಸಿರುವ ಷರತ್ತುಗಳು ತಪ್ಪೇನಲ್ಲ. ಇದರಿಂದ ಯಾವುದೇ ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ಚ್ಯುತಿ ಆಗುವುದಿಲ್ಲ. ಹಾಗಾಗಿ ಈ ನಿರ್ಧಾರ ಅಸಮಂಜಸವಲ್ಲ ಎಂಬ ತೀರ್ಮಾನ ನೀಡಿದೆ.
ಜುಲೈ 31ರಂದು ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸುವ ಮೂಲಕ ಕರ್ನಾಟಕ ಹಿಂದಿನ ನಿರ್ಬಂಧಗಳನ್ನು ಸಡಿಲಗೊಳಿಸಿದೆ. ಈಗ ಮೊದಲಿನ ಹಾಗೆ ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿ ಹೆಚ್ಚಿನ ನಿರ್ಬಂಧಗಳಿಲ್ಲ ಎಂದು ನ್ಯಾಯಪೀಠ ಹೇಳಿದೆ. ಇದು ಪ್ರಯಾಣದ ದಿನಾಂಕದಿಂದ 15 ದಿನಗಳಲ್ಲಿ ತೆಗೆದುಕೊಂಡ ಆರ್‌ಟಿ-ಪಿಸಿಆರ್ ಪರೀಕ್ಷೆಯ ಅಗತ್ಯವನ್ನು ಸಡಿಲಿಸಿದೆ. ವಿದ್ಯಾರ್ಥಿಗಳು, ವ್ಯಾಪಾರ ವೃತ್ತಿಪರರು ಮತ್ತು ಇತರರ ಹಿತದೃಷ್ಟಿಯಿಂದ ಇದನ್ನು ಮಾಡಲಾಗಿದೆ ಎಂದು ಅದು ಹೇಳಿದೆ.
ಕೇರಳ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ವ್ಯಕ್ತಿಗಳ ಸಂಚಾರದ ಹಕ್ಕುಗಳನ್ನು ನಿರ್ಬಂಧಿಸಲಾಗಿಲ್ಲ. ಕಾಸರಗೋಡು ಜಿಲ್ಲೆಯ ವ್ಯಕ್ತಿಗಳು ಮಂಗಳೂರು ಅಥವಾ ಕರ್ನಾಟಕದ ಇತರ ಭಾಗಗಳಿಗೆ ಪ್ರಯಾಣಿಸಲು ಯಾವುದೇ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿಲ್ಲ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯವು ಹೊರಡಿಸಿದ ಸುತ್ತೋಲೆಗಳಲ್ಲಿ ಈ ನ್ಯಾಯಾಲಯವು ಮಧ್ಯ ಪ್ರವೇಶಿಸುವಂತಿಲ್ಲ. ಆದ್ದರಿಂದ ಮಧ್ಯಪ್ರವೇಶಿಸಲು ನಮಗೆ ಯಾವುದೇ ಕಾರಣವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಈ ವಿಷಯದ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಪ್ರಾತಿನಿಧ್ಯ ನೀಡಲು ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಸ್ವಾತಂತ್ರ್ಯ ನೀಡಿದೆ. ಕೇರಳದ ಶಾಸಕರ ಪರ ವಾದ ಮಂಡಿಸಿದ ವಕೀಲ ಹ್ಯಾರಿಸ್ ಬೀರನ್ ಅವರು, ಕಾಸರಗೋಡಿನ ಜನರು ಶಿಕ್ಷಣ, ವೈದ್ಯಕೀಯ ಮತ್ತು ಇತರ ಅಗತ್ಯಗಳಿಗಾಗಿ ಮಂಗಳೂರನ್ನು ಅವಲಂಬಿಸಿದ್ದಾರೆ. ಕರ್ನಾಟಕ ಹೊರಡಿಸಿರುವ ಸುತ್ತೋಲೆಗಳಿಂದ ಪ್ರತಿದಿನ ಮಂಗಳೂರಿಗೆ ಅವರ ಪ್ರಯಾಣವನ್ನು ನಿರ್ಬಂಧಿಸಲಾಗಿದೆ ಎಂದಿದ್ದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ್ದ ವಕೀಲ ಹ್ಯಾರಿಸ್ ಬೀರನ್, ಗಾಳಿ, ನೀರು ಅಥವಾ ರಸ್ತೆಯ ಮೂಲಕ ವ್ಯಕ್ತಿಗಳು ಮತ್ತು ಸರಕುಗಳ ಅಂತರ್-ರಾಜ್ಯ ಸಂಚಾರದ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸದಂತೆ ಸರ್ಕಾರ ಹೇಳಿದೆ. ಆದರೆ, ಕರ್ನಾಟಕದ ಗಡಿಯೊಳಗೆ ಕೇರಳಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಆಕ್ಷೇಪಿಸಿದ್ದರು.