ಸುಳ್ಯ: ನಗರ ಪಂಚಾಯತ್ ಕಚೇರಿ ಬಾಗಿಲಲ್ಲಿ ಕುಳಿತು ವಿಪಕ್ಷ ಸದಸ್ಯರುಗಳಿಂದ ಶುದ್ಧ ನೀರಿನ ಬೇಡಿಕೆ ಇಟ್ಟು ಪ್ರತಿಭಟನೆ

ಸುಳ್ಯ ನಗರದಲ್ಲಿ ಕಳೆದ ಎರಡು ವಾರಗಳಿಂದ ನಗರ ಪಂಚಾಯತ್ ನೀರು ಸರಬರಾಜಿನಲ್ಲಿ ಕೆಂಪು ಮಿಶ್ರಿತ ನೀರು ಬರುತ್ತಿದ್ದು ಸಾರ್ವಜನಿಕರು ಆಕ್ರೋಶಗೊಂಡಿದ್ದರು. ಈ ಘಟನೆಯ ವರದಿ ಬರುತ್ತಿದ್ದಂತೆ ಸುಳ್ಯ ನ್ಯಾಯಾಲಯದ ನ್ಯಾಯಾಧೀಶರುಗಳು ನಗರ ಪಂಚಾಯತ್ ನೀರು ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ನಂತರ ಮಾಧ್ಯಮಗಳಲ್ಲಿ ಈ ವರದಿಯು ಪ್ರಸಾರಗೊಂಡು ಸುಳ್ಯದಲ್ಲಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಈ ಎಲ್ಲ ಘಟನೆಗಳ ವಿವರವನ್ನು ಪಡೆದ ಸ್ಥಳೀಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಪತ್ರಿಕಾಗೋಷ್ಠಿ ಕರೆದು ನೀರು ಶುದ್ಧೀಕರಣ ಕೆಲಸ ಕಾರ್ಯಕ್ಕೆ ಹಲವಾರು ಕೋಟಿ ರೂಪಾಯಿಗಳ ಅನುದಾನ ಬೇಕಾಗಿದ್ದು ಇದನ್ನು ಸರಕಾರದ ಗಮನಕ್ಕೆ ನೀಡಲಾಗಿದೆ. ಅನುದಾನ ಬಂದ ಬಳಿಕ ಸರಿಪಡಿಸಲಾಗುವುದು ಎಂದು ಭರವಸೆಯನ್ನು ನೀಡಿದರು.
ಆದರೆ ಇದರಿಂದ ಸಂತುಷ್ಟರಾಗದ ಸುಳ್ಯ ನಗರ ಪಂಚಾಯತ್ ವಿಪಕ್ಷ ನಾಯಕರುಗಳು ಇಂದು ನಗರ ಪಂಚಾಯತ್ ಕಚೇರಿಯ ಬಾಗಿಲಲ್ಲಿ ಕುಳಿತು ಆಡಳಿತ ಪಕ್ಷದ ವಿರುದ್ಧ ಧಿಕ್ಕಾರ ವನ್ನು ಕೂಗಿ, ಆದಷ್ಟು ಶೀಘ್ರದಲ್ಲಿ ಜನತೆಗೆ ಶುದ್ಧ ನೀರನ್ನು ಒದಗಿಸಿ, ಸಾರ್ವಜನಿಕರ ಆರೋಗ್ಯ ರಕ್ಷಣೆಯನ್ನು ಕಾಪಾಡುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಸದಸ್ಯ ಎಂ ವೆಂಕಪ್ಪ ಗೌಡ ಸುಳ್ಯದ ಜನತೆಗೆ ಕೆಂಪು ಮಿಶ್ರಿತ ನೀರು, ಅದೇ ರೀತಿ ಸೀಮೆಎಣ್ಣೆ ವಾಸನೆ ಬರುವ ನೀರು, ಮುಂತಾದ ಕಲುಷಿತ ನೀರು ಗಳನ್ನು ಒದಗಿಸಿ ಶುದ್ಧ ನೀರನ್ನು ನೀಡುತ್ತಿದ್ದೇವೆ ಎಂದು ಜನರ ಆರೋಗ್ಯವನ್ನು ಕೆಡಿಸಲು ಸುಳ್ಯ ನಗರ ಪಂಚಾಯತಿನ ಆಡಳಿತ ಬಿಜೆಪಿ ಪಕ್ಷ ಮುಂದಾಗಿದೆ. ಇವರಿಗೆ ನಗರದ ಜನತೆಯ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ. ಕೇವಲ ರಾಜಕೀಯ ಮಾಡುವುದೇ ಇವರ ಉದ್ದೇಶವಾಗಿದೆ. ನಗರ ಪಂಚಾಯತಿಯ ಪ್ರತಿಯೊಂದು ವಿಭಾಗದಲ್ಲಿಯೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇವರಿಗೆ ಅಧಿಕಾರ ನಡೆಸಲು ಬಾರದೆ ಇದ್ದಲ್ಲಿ ಮನೆಗೆ ಹೋಗಿ ಕುಳಿತುಕೊಳ್ಳಲಿ. ಆಡಳಿತ ಪಕ್ಷದಲ್ಲಿ ಕುಳಿತುಕೊಂಡು ತಪ್ಪು ಮಾಡುತ್ತಿದ್ದೀರಿ ಎಂದು ಹೇಳಿದರೆ ಅದಕ್ಕೆ ದಾರಿತಪ್ಪಿಸುವ ರೀತಿಯಲ್ಲಿ ಪತ್ರಿಕಾಗೋಷ್ಠಿಯನ್ನು ಮಾಡಿ ಕಥೆಗಳನ್ನು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು. ಆದ್ದರಿಂದ ಕೂಡಲೇ ಸಾಮಾನ್ಯ ಸಭೆಯನ್ನು ಕರೆದು ಎಲ್ಲ ವಿಷಯದ ಕುರಿತು ಸಭೆಯಲ್ಲಿ ಚರ್ಚಿಸಿ ಶೀಘ್ರ ಸ್ಪಂದನೆ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಿರಂತರ ಪ್ರತಿಭಟನೆಯ ಮೂಲಕ ನಗರಪಂಚಾಯತ್ ವೇದಿಕೆಯಾಗಲಿದೆ ಎಂದು ಹೇಳಿದರು.
ಇದೇ ವೇಳೆ ಮತ್ತೋರ್ವ ವಿಪಕ್ಷ ನಾಯಕ ಕೆಎಸ್ ಉಮ್ಮರ್ ಮಾತನಾಡಿ ಕಳೆದ ಹಲವಾರು ದಿನಗಳಿಂದ ಕುಡಿಯುವ ನೀರು ಕೆಂಪು ಮಿಶ್ರಿತವಾಗಿದ್ದು ಸಾರ್ವಜನಿಕರು ಸಮಸ್ಯೆಯನ್ನು ಹೇಳುತ್ತಿದ್ದದ್ದನ್ನು ಕಂಡು ಸುಳ್ಯ ನ್ಯಾಯಾಲಯದ ನ್ಯಾಯಾಧೀಶರು ಗಳು ಸಾರ್ವಜನಿಕರ ಹಿತ ಶಕ್ತಿಗಾಗಿ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಸರಿಪಡಿಸುವಂತೆ ಆದೇಶ ನೀಡಿದರೆ, ಆಡಳಿತ ಪಕ್ಷದ ಮುಖಂಡರು ಪತ್ರಿಕಾಗೋಷ್ಠಿ ಕರೆದು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಾರೆ. ಇದು ಎಷ್ಟು ಸರಿ ಎಂದು ಅವರು ಕೇಳಿದರು. ಸುಳ್ಯದ ನಗರದ ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿದರೆ ಸಾವಿರಾರು ಸಮಸ್ಯೆಗಳು ಇವೆ. ನಿವೇಶನರಹಿತರಿಗೆ ಒಂದುವರೆ ಸೆಂಟ್ ಜಾಗದ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಸಾಧ್ಯವಾಗದ ಈ ಆಡಳಿತ ಪಕ್ಷವು ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು. ಮಾತೆತ್ತಿದರೆ ರಾಜಕೀಯ ಮಾಡುತ್ತಾರೆ ರಾಜಕೀಯ ಮಾಡುತ್ತಾರೆ ಎಂದು ದೂರುವ ಇವರು ಜನರ ಬಗ್ಗೆ ಕಾಳಜಿ ಇಲ್ಲದ ರೀತಿಯಲ್ಲಿ ವರ್ತಿಸುತ್ತಿರುವುದು ಒಂದು ಶಾಪವಾಗಿದೆ. ಇವರಿಗೆ ಊರಿನ ಜನತೆಯ ಹಾಗೂ ಶ್ರೀರಾಮನ ಶಾಪಕೂಡ ಇವರಿಗೆ ತಟ್ಟುತ್ತದೆ ಎಂದು ಹೇಳಿದರು.
ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಮಾತನಾಡಿ ನಮ್ಮ ಗಾಂಧಿನಗರ ಭಾಗದ ಕುಡಿಯುವ ನೀರಿನ ಘಟಕ ಕಳೆದ ಎರಡು ವರ್ಷಗಳಿಂದ ಪಾಳು ಬಿದ್ದಿದ್ದು ಇದನ್ನು ದುರಸ್ತಿ ಪಡಿಸಲು ಇವರ ಬಳಿ ಹೇಳಿದರೆ ನಾನಾ ರೀತಿಯ ಕಾರಣಗಳನ್ನು ಹೇಳುತ್ತಾ ತಮ್ಮ ಜವಾಬ್ದಾರಿಯಿಂದ ನುಣಿಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಂದು ಪ್ರತಿಭಟನೆ ನಡೆಯುತ್ತದೆ ಎಂಬ ಮಾಹಿತಿ ತಿಳಿದ ನಗರ ಪಂಚಾಯತ್ ಅಧ್ಯಕ್ಷರು ಮತ್ತು ಮುಖ್ಯ ಅಧಿಕಾರಿಗಳು ನಗರ ಪಂಚಾಯಿತಿ ಕಚೇರಿಗೆ ಬಾರದೆ ಬೇರೆ ಕೆಲಸದ ನಿಮಿತ್ತ ತೆರಳಿದ್ದಾರೆ. ಇವರ ಜವಾಬ್ದಾರಿತನ ಇದರಲ್ಲಿ ತಿಳಿಯುತ್ತದೆ ಎಂದು ಹೇಳಿದರು.
ನಗರ ಪಂಚಾಯತ್ ಸದಸ್ಯರುಗಳಾದ ರಿಯಾಜ್ ಕಟ್ಟೆಕ್ಕಾರ್, ಧೀರ ಕ್ರಾಸ್ತ ಆಡಳಿತ ಪಕ್ಷದ ವಿರುದ್ಧ ಮಾತನಾಡಿ ಕಿಡಿಕಾರಿದರು.
ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವುದನ್ನು ಎಚ್ಚರಿಸಿದ ಪ್ರತಿಭಟನಾಕಾರರು ತಮ್ಮ ಬಳಿ ತಂದಿದ್ದ ನಲ್ಲಿಯ ನೀರಿನ ಬಾಟಲಿಯನ್ನು ಮುಖ್ಯ ಅಧಿಕಾರಿ ಎಂ ಆರ್ ಸ್ವಾಮಿಯವರ, ಹಾಗೂ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ರವರ ಕಚೇರಿಯ ಟೇಬಲಿನ ಮೇಲೆ ಇರಿಸಿ, ಅವರು ಕುಳಿತುಕೊಳ್ಳುವ ಕುರ್ಚಿಯ ಮುಂಭಾಗದಲ್ಲಿ ನಿಂತು ನಾವು ಪ್ರತಿಭಟನೆ ಮಾಡುವ ವಿಚಾರವನ್ನು ತಿಳಿದು ಸ್ಥಳಕ್ಕೆ ಬಾರದೇ ಇದ್ದರೂ ನೀವು ಇಲ್ಲೇ ಇರುವಂತೆ ಭಾವಿಸಿ ನಮ್ಮ ಮನವಿಯನ್ನು ಮತ್ತು ನಾವು ತಂದಿರುವ ನಲ್ಲಿ ನೀರನ್ನು ಇಲ್ಲೇ ಇರಿಸಿ ಹೋಗುತ್ತಿದ್ದೇವೆ. ನೀವು ಬಂದ ನಂತರ ಅದನ್ನು ಸ್ವೀಕರಿಸಿ ಸುಳ್ಯದ ಜನತೆಯ ಬಹುದೊಡ್ಡ ಸಮಸ್ಯೆ ಕುಡಿಯುವ ನೀರನ್ನು ಶುದ್ಧ ನೀರು ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಕುರ್ಚಿಗೆ ನಮಸ್ಕರಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.