11 ಜನರ ತಂಡದಲ್ಲಿ ಕೇವಲ ಮೊಹಮ್ಮದ್ ಶಮಿ ವಿರುದ್ಧ ಗೂಬೆ ಕೂರಿಸಿ, ಧರ್ಮವನ್ನು ನಿಂದಿಸುವುದು ಸರಿಯಲ್ಲ: ಅಸಾದುದ್ದೀನ್ ಒವೈಸಿ
ಹೈದರಾಬಾದ್: ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧದ ಭಾರತ ಸೋಲು, ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನಸ್ಸು ನೋಯಿಸಿರುವುದು ಸತ್ಯ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸೋಲಿಗೆ ಮೊಹಮ್ಮದ್ ಶಮಿ ಕಾರಣ ಎಂದು ಕೆಲವರು ಅರೋಪಿಸುತ್ತಿರುವುದು ಸರಿಯಲ್ಲ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಕಿಡಿಕಾರಿದ್ದಾರೆ.
ಮೊಹಮ್ಮದ್ ಶಮಿ ಅವರ ಓವರ್‌ನಲ್ಲೇ ಪಾಕಿಸ್ತಾನ ನಿಗದಿತ ಗುರಿ ತಲುಪಿ ಜಯ ದಾಖಲಿಸಿತ್ತು. ಶಮಿ ಅವರ ಕಳಪೆ ಪ್ರದರ್ಶನದಿಂದಾಗಿ ಭಾರತ ಸೋಲುಂಡಿತು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೊಹಮ್ಮದ್ ಶಮಿ ಅವರ ಧರ್ಮವನ್ನೂ ಎಳೆದು ತಂದಿದ್ದಾರೆ.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅಸಾದುದ್ದೀನ್ ಒವೈಸಿ, ಭಾರತ ತಂಡದಲ್ಲಿ ಮೊಹಮ್ಮದ್ ಶಮಿ ಅವರೊಬ್ಬರೇ ಇದ್ದರೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಮೊಹಮ್ಮದ್ ಶಮಿ ಮುಸ್ಲಿಂ ಎಂಬ ಕಾರಣಕ್ಕೆ ಅವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದೂ ಒವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್‌ನಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ ಕೆಲವರು ಇದರಲ್ಲೂ ಧರ್ಮವನ್ನು ಟೀಕಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ. 11 ಜನರ ತಂಡದಲ್ಲಿ ಕೇವಲ ಮೊಹಮ್ಮದ್ ಶಮಿ ಅವರ ವಿರುದ್ಧ ಮಾತ್ರ ಮಾತನಾಡುವುದು ಎಷ್ಟು ಸರಿ ಎಂದು ಒವೈಸಿ ಪ್ರಶ್ನಿಸಿದ್ದಾರೆ.