ಕೋವಿಡ್ ಲಸಿಕೆ ಕಡ್ಡಾಯ ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು: ಕೋವಿಡ್ ಲಸಿಕೆಯನ್ನು ಉದ್ಯೋಗದೊಂದಿಗೆ ಜೋಡಿಸಲಾಗಿದೆ ಎಂದು ಆರೋಪಿಸಿ ಕೈಗಾರಿಕೆಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಸಿಬ್ಬಂದಿಗೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಿ ಬಿಬಿಎಂಪಿ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಸುತ್ತೋಲೆ ಪ್ರಶ್ನಿಸಿ ವಕೀಲ ಸೈಯದ್ ಶುಜಾತ್ ಮೆಹಿª ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಅರ್ಜಿಯಲ್ಲಿನ ಅಂಶಗಳನ್ನು ಗಮನಿಸಿದ ನ್ಯಾಯಪೀಠ, ಅರ್ಜಿದಾರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಸ್ವಯಂ ಲಸಿಕೆ ಪಡೆದುಕೊಂಡು ಲಸಿಕೆ ವಿರುದ್ಧ ಅರ್ಜಿ ಸಲ್ಲಿಸಿರುವ ನೀವು ಕೋವಿಡ್ ಲಸಿಕೆ ಬಗ್ಗೆ ಸಾರ್ವಜನಿಕರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದೀರಿ.
ನಿವೊಬ್ಬ ವಕೀಲರಾಗಿದ್ದೀರಿ ಎಂಬುದನ್ನು ನೆನಪಿಟ್ಟುಕೊಳ್ಳಿ. ಅರ್ಜಿ ವಾಪಸ್ ಪಡೆದುಕೊಳ್ಳಿ. ಇಲ್ಲದಿದ್ದರೆ ದೊಡ್ಡ ಮೊತ್ತದ ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿತು.
ಅರ್ಜಿದಾರರು ವಾದ ಮಂಡಿಸಿ, ನಾನೂ ಸ್ವಪ್ರೇರಣೆಯಿಂದ ಮೊದಲ ಡೋಸ್ ಪಡೆದುಕೊಂಡಿದ್ದೇನೆ. ಲಸಿಕೆಯ ಸಾಮರ್ಥಯ ಅಥವಾ ಲಸೀಕಾಕರಣವನ್ನು ನಾನು ಪ್ರಶ್ನಿಸುತ್ತಿಲ್ಲ. ಬಿಬಿಎಂಪಿ ಅನುಸರಿಸುತ್ತಿರುವ ಲಸೀಕಾರಣದ ವಿಧಾನವನ್ನಷ್ಟೇ ಆಕ್ಷೇಪಿಸುತ್ತಿದ್ದೇನೆ.
ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಿಬ್ಬಂದಿಗೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಿದೆ. ಲಸಿಕಾ ಅಭಿಯಾನವೇ ಬೇರೆ, ಉದ್ಯೋಗವೇ ಬೇರೆ. ಆದರೆ, ಪಾಲಿಕೆ ಇವೆರಡಕ್ಕೂ ಸಂಪರ್ಕ ಕಲ್ಪಿಸುತ್ತಿದೆ. ಇದು ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ವಿವರಿಸಿದರು.





