ಕಲಬುರಗಿ: ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ, ತಾಯಿ ಆತ್ಮಹತ್ಯೆ
ಕಲಬುರಗಿ: ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ, ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕಲಬುರಗಿಯ ಪಂಚಶೀಲ ನಗರದಲ್ಲಿ ನಡೆದಿದೆ.
27 ವರ್ಷದ ದೀಕ್ಷಾ ಶರ್ಮಾ ಕುಕೃತ್ಯ ಎಸಗಿದ ಮಹಿಳೆ. ದೀಕ್ಷಾ ಅವರ ಎರಡು ವರ್ಷದ ಪುತ್ರಿ ಸಿಂಚನಾ ತಾಯಿಯೊಂದಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇನ್ನು 4 ವರ್ಷದ ಪುತ್ರ ಧನಂಜಯ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಪತಿಯ ಅಕ್ರಮ ಸಂಬಂಧದಿಂದ ಬೇಸತ್ತು ದೀಕ್ಷಾ ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ದೀಕ್ಷಾ ಅತ್ತೆ ಕೂಡ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಮಕ್ಕಳಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ಕಾಳಗಿ ತಾಲೂಕಿನ ದೀಕ್ಷಾ ಅವರನ್ನು ಇಲ್ಲಿನ ಪಂಚಶೀಲ ನಗರದ ವಸಂತ ಶರ್ಮಾಗೆ ಐದು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ದೀಕ್ಷಾಗೆ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಮತ್ತು ತವರು ಮನೆಗೆ ಕಳುಹಿಸುತ್ತಿರಲಿಲ್ಲ ಎನ್ನಲಾಗಿದೆ.
ಸೋಮವಾರ ಕೂಡ ತವರು ಮನೆಗೆ ಹೋಗಲು ದೀಕ್ಷಾ ತಯಾರಿ ಆಗಿದ್ದಳು. ಆದರ, ಗಂಡನ ಮನೆಯಲ್ಲಿ ಅವಕಾಶ ನೀಡಿರಲಿಲ್ಲ ಎಂದು ಹೇಳಲಾಗಿದೆ. ಇದರಿಂದ ಬೇಸತ್ತು ಮಧ್ಯಾಹ್ನ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲೇ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಪರಿಣಾಮ ತಾಯಿ ಮತ್ತು ಮಗಳು ಸಾವನ್ನಪ್ಪಿದ್ದಾರೆ. ಸದ್ಯ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ.