ಪುಣೆ: CIPLA ಘಟಕದ ಡ್ರಗ್ ಲೈಸೆನ್ಸ್ ರದ್ದುಗೊಳಿಸಿದ FDA
ಪುಣೆ: ಪ್ರಮುಖ ಭಾರತೀಯ ಔಷಧ ತಯಾರಿಕಾ ಸಂಸ್ಥೆಯಾದ ಸಿಪ್ಲಾ (Cipla) ಲಿಮಿಟೆಡ್‌ಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಶಾಕ್ ನೀಡಿದೆ. ಔಷಧ ಸಂಗ್ರಹಣೆ ಹಾಗೂ ಸೂಕ್ತ ದಾಖಲೆ ನಿರ್ವಹಣೆಯಲ್ಲಿ ಗಂಭೀರ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಪುಣೆಯ ಕುರ್ಕುಂಭ್‌ನಲ್ಲಿರುವ ಸಿಪ್ಲಾ ಘಟಕದ ಡ್ರಗ್ ಲೈಸೆನ್ಸ್ ಅನ್ನು ಎಫ್‌ಡಿಎ ರದ್ದುಗೊಳಿಸಿದೆ.
ಔಷಧ ತಯಾರಿಕೆ, ಬ್ಯಾಚ್ ವಿವರ ಹಾಗೂ ವಿತರಣೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು (Good Manufacturing Practices – GMP) ಸಮರ್ಪಕವಾಗಿ ನಿರ್ವಹಿಸದೇ ಇರುವುದು ಎಫ್‌ಡಿಎ ತನಿಖೆಯಲ್ಲಿ ಕಂಡುಬಂದಿದೆ. ಔಷಧ ನಿಯಂತ್ರಣ ಕಾಯ್ದೆಯಡಿ ಕಡ್ಡಾಯವಾಗಿರುವ ಪ್ರಕ್ರಿಯೆಗಳನ್ನು ಕಡೆಗಣಿಸಿದ್ದಕ್ಕಾಗಿ ನಿಯಂತ್ರಣ ಪ್ರಾಧಿಕಾರವು ಘಟಕದ ಪರವಾನಗಿ ರದ್ದುಪಡಿಸುವ ಕಠಿಣ ಕ್ರಮ ಕೈಗೊಂಡಿದೆ.
ಔಷಧಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಹಾಗೂ ರೋಗಿಗಳ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಎಫ್‌ಡಿಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾಗಿದ್ದ ನೋಟಿಸ್‌ಗಳಿಗೆ ಸಂಸ್ಥೆಯು ಸಮರ್ಪಕ ಸ್ಪಷ್ಟನೆ ನೀಡದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಈ ಕ್ರಮದಿಂದಾಗಿ ಘಟಕದಲ್ಲಿನ ಉತ್ಪಾದನಾ ಚಟುವಟಿಕೆಗಳಿಗೆ ಹಿನ್ನಡೆಯಾಗುವ ಸಾಧ್ಯತೆಯಿದ್ದು, ಎಫ್‌ಡಿಎ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅಥವಾ ನಿಯಮಾವಳಿಗಳನ್ನು ಸರಿಪಡಿಸಿಕೊಂಡು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಸಿಪ್ಲಾ ಮುಂದಾಗುವ ನಿರೀಕ್ಷೆಯಿದೆ.





