ಹೊನ್ನಾವರ: ಮಹಿಳೆಯ ಅಸಹಜ ಸಾವು ಪ್ರಕರಣಕ್ಕೆ ತಿರುವು: ಪತಿಯ ಬಂಧನ
ಹೊನ್ನಾವರ: ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಗುಂದ ಗ್ರಾಮದ ನಿವಾಸಿ ಮಂಗಲಾ ಗಣಪತಿ ನಾಯ್ಕ (27) ಎಂಬ ಮಹಿಳೆಯ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಪತ್ನಿಯನ್ನು ಕೊಲೆ ಮಾಡಿದ ಆರೋಪದಡಿ ಪತಿ ಗಣಪತಿ ನಾಯ್ಕ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 28ರಂದು ಮಂಗಲಾ ಅವರು ಮೃತಪಟ್ಟಿದ್ದು, ಈ ಸಂಬಂಧ ಮಂಕಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿತ್ತು. ಆದರೆ ಮೃತಳ ಸಾವಿನ ಬಗ್ಗೆ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಸಂಶಯ ವ್ಯಕ್ತವಾದ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿದಾಗ, ಇದು ಅಸಹಜ ಸಾವಲ್ಲ, ಕೊಲೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.
ಮುರ್ಡೇಶ್ವರ ವೃತ್ತ ನಿರೀಕ್ಷಕ (ಸಿಪಿಐ) ಜಗದೀಶ ಹಂಚನಾಳ ಅವರ ಮಾರ್ಗದರ್ಶನದಲ್ಲಿ ಮಂಕಿ ಠಾಣೆಯ ಪಿಎಸ್‌ಐ ಕುಮಾರ ಕಾಂಬಳೆ ನೇತೃತ್ವದ ತನಿಖಾ ತಂಡ ತನಿಖೆ ನಡೆಸಿ, ಮೃತಳ ಪತಿ ಹಾಗೂ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಗಣಪತಿ ಮಂಜುನಾಥ ನಾಯ್ಕನನ್ನು ಬಂಧಿಸಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





