ನೇಪಾಳ ಜಲಪ್ರಳಯ: ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಸಿಇಒ ಲಕ್ಷ್ ಗೋಪಿಸೆಟ್ಟಿ ನಾಪತ್ತೆ
ನೇಪಾಳ: ಭೀಕರ ಜಲಪ್ರಳಯ ದೇಶದ ಹಲವು ಪ್ರದೇಶಗಳಲ್ಲಿ ಭಾರೀ ಹಾನಿ ಉಂಟುಮಾಡಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ. ಇದರ ನಡುವೆ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್‌ನ ಸಿಇಒ ಲಕ್ಷ್ ಗೋಪಿಸೆಟ್ಟಿ ನೇಪಾಳ ಪ್ರವಾಸದಲ್ಲಿದ್ದ ವೇಳೆ ಪ್ರವಾಹದ ಬಳಿಕ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಇನ್ಫೋಸಿಸ್ ತಿಳಿಸಿದೆ. ಅವರು ವೈಯಕ್ತಿಕ ಪ್ರವಾಸದ ಹಿನ್ನೆಲೆ ನೇಪಾಳಕ್ಕೆ ತೆರಳಿದ್ದರು ಎಂದು ಕಂಪನಿ ಹೇಳಿದೆ.
ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ ಗೋಪಿಸೆಟ್ಟಿ ನೇಪಾಳಕ್ಕೆ ವೈಯಕ್ತಿಕ ಭೇಟಿ ನೀಡಿದ್ದರು. ಆದರೆ ಭೀಕರ ಪ್ರವಾಹದ ನಂತರ ಅವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ಅವರ ಸುರಕ್ಷತೆ ಮತ್ತು ಆರೋಗ್ಯವೇ ಕಂಪನಿಯ ಮೊದಲ ಆದ್ಯತೆ ಎಂದು ಇನ್ಫೋಸಿಸ್ ಹೇಳಿದೆ.
ಲಕ್ಷ್ ಗೋಪಿಸೆಟ್ಟಿ ಅವರ ಕುರಿತು ಮಾಹಿತಿ ಸಂಗ್ರಹಿಸಲು ಸಂಬಂಧಿತ ಸಂಸ್ಥೆಗಳೊಂದಿಗೆ ಕಂಪನಿ ಸಂಪರ್ಕದಲ್ಲಿದೆ. ಅವರ ಕುಟುಂಬದವರೊಂದಿಗೂ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಇನ್ಫೋಸಿಸ್ ತಿಳಿಸಿದೆ.
ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ನೇಪಾಳದ ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹದ ಪರಿಣಾಮ ರಸ್ತೆ, ಸೇತುವೆ ಸೇರಿದಂತೆ ಹಲವು ಮೂಲಸೌಕರ್ಯಗಳಿಗೆ ಹಾನಿಯಾಗಿದ್ದು, ದೂರದ ಪ್ರದೇಶಗಳಿಗೆ ರಕ್ಷಣಾ ತಂಡಗಳು ತಲುಪುವುದೇ ಸವಾಲಾಗಿದೆ.
ಪ್ರವಾಹದ ನಂತರ ನೂರಾರು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಈಗಾಗಲೇ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಇನ್ನೂ ಹಲವರಿಗಾಗಿ ಶೋಧ ಮುಂದುವರಿದಿದೆ.





