SIR ಹೊತ್ತಲ್ಲೇ ಸುಟ್ಟ ಸ್ಥಿತಿಯಲ್ಲಿ ಗುರುತಿನ ಚೀಟಿ, ಆಧಾರ್ ಕಾರ್ಡ್ ಪತ್ತೆ: ತನಿಖೆಗೆ ಆದೇಶ
ಹಾಸನ: SIR ಹೊತ್ತಲ್ಲೇ ಅಪರಿಚಿತರು ರಾಶಿ ರಾಶಿ ಮತದಾರರ ಗುರುತಿನ ಚೀಟಿ (Voter ID), ಆಧಾರ್ ಕಾರ್ಡ್ (Aadhaar Card) ಹಾಗೂ ಪಾನ್ ಕಾರ್ಡ್ಗಳನ್ನು ಸುಟ್ಟು ಹಾಕಿದ ಘಟನೆ ಸಕಲೇಶಪುರ (Sakleshpur) ಪಟ್ಟಣದ ಶ್ರೀಗಂಧ ಹೋಟೆಲ್ ಬಳಿ ನಡೆದಿದೆ. ಈ ಸಂಬಂಧ ಸಕಲೇಶಪುರ ಉಪವಿಭಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
ಅ.13 ರಂದು ಈ ಘಟನೆ ನಡೆದಿತ್ತು. ಇಂದು (ಅ.15) ಘಟನಾ ಸ್ಥಳಕ್ಕೆ ಸಕಲೇಶಪುರ ಉಪವಿಭಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ವರದಿ ಕೊಡುವಂತೆ ಸೂಚನೆ ನೀಡಿದ್ದರು. ಅದರಂತೆ ಇಂದು ಪರಿಶೀಲನೆ ನಡೆಸಲಾಗಿದೆ ಎಂದರು.
ಈ ಸ್ಥಳದಲ್ಲಿ ಯಾದಗಿರಿ, ಮಂಡ್ಯ ಸೇರಿ ರಾಜ್ಯದ ಬೇರೆ ಬೇರೆ ಭಾಗದ ಹಾಗೂ ಹೊರ ರಾಜ್ಯದ 26 ಮತದಾರರ ಗುರುತಿನ ಚೀಟಿಗಳು ಸಿಕ್ಕಿವೆ. ಈ ಗುರುತಿನ ಚೀಟಿಗಳು ಸಕಲೇಶಪುರ ತಾಲೂಕಿಗೆ ಸೇರಿದ್ದಲ್ಲ. 30 ರಿಂದ 40 ಆಧಾರ್ ಕಾರ್ಡ್ಗಳು ಸಿಕ್ಕಿವೆ. ಪಾನ್ ಕಾರ್ಡ್ಗಳು ಸಿಕ್ಕಿವೆ, ಎಲ್ಲವನ್ನೂ ಪೊಲೀಸರಿಗೆ ನೀಡಿದ್ದೇವೆ. ಮೇಲ್ನೋಟಕ್ಕೆ ಈ ದಾಖಲೆಗಳು ಎಸ್ಐಆರ್ಗೆ ಸಂಬಂಧಪಟ್ಟಂತೆ ಕಂಡುಬಂದಿಲ್ಲ ಎಂದು ತಿಳಿಸಿದರು.




