ಹೌತಿ ಬಂಡುಕೋರರ ದಾಳಿ ಭೀತಿ: ರಿಯಾದ್, ಜಿದ್ದಾ, ದಮ್ಮಾಮ್ ಮದೀನಾಕ್ಕೆ ತೆರಳುವ ಎಲ್ಲಾ ವಿಮಾನಗಳ ಹಾರಾಟ ಅ.17ರವರೆಗೆ ರದ್ದು
ಹೊಸದಿಲ್ಲಿ: ಯೆಮನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರ ನಿರಂತರ ದಾಳಿ ಹಾಗೂ ಸೌದಿ ಅರೇಬಿಯಾದಲ್ಲಿ ಬದಲಾಗುತ್ತಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ರಿಯಾದ್, ಜಿದ್ದಾ, ದಮ್ಮಾಮ್ ಮತ್ತು ಮದೀನಾ ನಗರಗಳಿಗೆ ತೆರಳುವ ಹಾಗೂ ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳ ಹಾರಾಟವನ್ನು ಅಕ್ಟೋಬರ್ 17ರವರೆಗೆ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಹೌತಿ ಬಂಡುಕೋರರ ತೀವ್ರ ದಾಳಿಗಳ ಕಾರಣದಿಂದ ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ವಾಯುಪ್ರದೇಶದಲ್ಲಿ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ ರಿಯಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಹ ಶನಿವಾರದವರೆಗೆ ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ವರದಿಯಾಗಿದೆ. ವಿಮಾನ ಹಾರಾಟ ರದ್ದಾಗಿರುವ ಕುರಿತು ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ವೇಳೆ ನೀಡಿರುವ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ವಿಳಾಸಗಳ ಮೂಲಕ ಅಧಿಕೃತ ಮಾಹಿತಿ ನೀಡಲಾಗುತ್ತಿದೆ ಎಂದು ಇಂಡಿಗೋ ಸ್ಪಷ್ಟಪಡಿಸಿದೆ.
ಪ್ರಯಾಣಿಕರು ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಇಂಡಿಗೋ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಬಳಸಿ ತಮ್ಮ ವಿಮಾನದ ಲೈವ್ ಸ್ಥಿತಿಯನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಯೋಗಕ್ಷೇಮವೇ ನಮ್ಮ ಅತ್ಯುನ್ನತ ಆದ್ಯತೆಯಾಗಿದ್ದು, ಸುರಕ್ಷಿತ ವಿಮಾನ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ವಾಯುಯಾನ ಹಾಗೂ ಭದ್ರತಾ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ಸಂಸ್ಥೆ ತಿಳಿಸಿದೆ. ಪ್ರಯಾಣಿಕರ ಅನುಮಾನಗಳು ಹಾಗೂ ತುರ್ತು ನೆರವಿಗಾಗಿ ಗ್ರಾಹಕ ಸೇವಾ ಸಹಾಯವಾಣಿ ತಂಡಗಳು ಸದಾ ಲಭ್ಯವಿವೆ.






