July 28, 2026

Gen Z ಪ್ರತಿಭಟನಾಕಾರರ ವಿರುದ್ಧ ಕಂಗನಾ ರಣಾವತ್ ವಿವಾದಾತ್ಮಕ ಹೇಳಿಕೆ: ವ್ಯಾಪಕ ಆಕ್ರೋಶ

0
IMG-20260728-WA0064

ನವದೆಹಲಿ: ಜಂತರ್ ಮಂತರ್ ಹಾಗೂ ದೇಶದ ವಿವಿಧ ನಗರಗಳಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ವೇಳೆ ಪ್ರತಿಭಟನಾಕಾರರು ಬಳಸಿದ ಭಾಷೆ, ಪೋಸ್ಟರ್ ಹಾಗೂ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ಕುರಿತು ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ನೀಡಿರುವ ಹೇಳಿಕೆ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

‘ಜೆನ್ ಜೀ’ (Gen Z) ಯುವಜನತೆಯನ್ನು ಗುರಿಯಾಗಿಸಿಕೊಂಡು ಕಂಗನಾ ಅವರು ಆಡಿದ ಆಕ್ಷೇಪಾರ್ಹ ಮಾತುಗಳು ಈಗ ತೀವ್ರ ಆಕ್ರೋಶಕ್ಕೆ ಗುರಿಯಾಗಿವೆ.

ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಕಂಗನಾ ರಣಾವತ್, ಪ್ರತಿಭಟನೆಯ ವೇಳೆ ಯುವಕ-ಯುವತಿಯರು ಬಳಸಿದ ಭಾಷೆ ಹಾಗೂ ಹಂಚಿಕೊಂಡ ರೀಲ್ಸ್‌ಗಳು ವಾಂತಿ ತರಿಸುವಂತಿವೆ ಎಂದು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಜೀವನದಲ್ಲೇ ಒಂದೇ ಕಡೆ ಇಷ್ಟೊಂದು ವಿಕೃತ ಮತ್ತು ಅಸಭ್ಯ ವಾತಾವರಣವನ್ನು ಎಲ್ಲೂ ನೋಡಿರಲಿಲ್ಲ ಎಂದಿರುವ ಅವರು, ಪ್ರತಿಭಟನಾಕಾರರು ಮಾತನಾಡುತ್ತಿರುವ ರೀತಿ ಹಾಗೂ ಬಳಸುತ್ತಿರುವ ಶಬ್ದಗಳು ತೀರಾ ಕೀಳುಮಟ್ಟದ್ದಾಗಿವೆ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಪ್ರತಿಭಟನಾಕಾರರ ಪೋಷಣೆ ಮತ್ತು ಸಂಸ್ಕಾರದ ಕುರಿತೂ ಪ್ರಶ್ನೆ ಎತ್ತಿರುವ ಅವರು, ಇಂತಹ ಮಕ್ಕಳಿಗೆ ಜನ್ಮ ನೀಡಿ ಬೆಳೆಸುತ್ತಿರುವವರು ಯಾರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತವು ಸಾಂಸ್ಕೃತಿಕ ಹಿರಿಮೆ ಹಾಗೂ ಸೌಂದರ್ಯಕ್ಕೆ ಹೆಸರಾದ ದೇಶವಾಗಿದೆ. ಆದರೆ ಪ್ರತಿಭಟನೆಯಲ್ಲಿ ತಮ್ಮನ್ನು ‘ಕಾಕ್ರೋಚ್’ ಎಂದು ಕರೆದುಕೊಂಡು, ಅದೇ ರೀತಿ ವರ್ತಿಸುತ್ತಿರುವ ಈ ಯುವಜನತೆ ಇಡೀ ಜಗತ್ತಿನ ಮುಂದೆ ಅಸಹ್ಯವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಸಾಮಾಜಿಕ ಜಾಲತಾಣದ ರೀಲ್ಸ್‌ಗಳನ್ನು ನೋಡಿ ತಮ್ಮ ಮನಸ್ಸಿಗೆ ತೀವ್ರ ಮುಜುಗರ ಹಾಗೂ ಗಾಯವಾಗಿದೆ, ನನಗೀಗ ಡಿಜಿಟಲ್ ವಿಶ್ರಾಂತಿಯ (Digital Detox) ಅಗತ್ಯವಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇಷ್ಟಕ್ಕೇ ನಿಲ್ಲಿಸದ ನಟಿ ಕಂಗನಾ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಿಂದೂ ಮಹಿಳೆಯರು ಹಾಗೂ ಯುವತಿಯರ ಮೇಲೆಯೂ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರನ್ನು ‘ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾದ ಭಾರತೀಯ ನಾರಿಯರು’ ಎಂದು ಬಣ್ಣಿಸಿರುವ ಕಂಗನಾ, ಅವರು ಅತ್ಯಂತ ಕೆಟ್ಟ ಸಂಸ್ಕಾರವುಳ್ಳವರಾಗಿದ್ದು, ಗೃಹಿಣಿಯರಾಗಲು ಕೂಡ ಅನರ್ಹರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ತಮ್ಮ ಪೋಷಕರ ಸಂಪಾದನೆಯಲ್ಲಿ ಮೋಜು ಮಾಡುತ್ತಾ, ಗಾಂಜಾ, ಮದ್ಯಪಾನದಂತಹ ಚಟಗಳಲ್ಲಿ ತೊಡಗಿಸಿಕೊಂಡಿರುವುದನ್ನು ಸ್ವತಂತ್ರ ಜೀವನ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ ಕಂಗನಾ, ಇವರಿಂದ ಸಮಾಜಕ್ಕೆ ಅಥವಾ ದೇಶದ ವ್ಯವಸ್ಥೆಗೆ ಯಾವುದೇ ಕೊಡುಗೆ ಇಲ್ಲ, ಇವರು ವಿದ್ಯಾಭ್ಯಾಸದಲ್ಲೂ ಮುಂದಿಲ್ಲ ಮತ್ತು ಕುಟುಂಬ ನಡೆಸುವ ಯೋಗ್ಯತೆಯೂ ಇಲ್ಲದವರು ಎಂದು ಹರಿಹಾಯ್ದಿದ್ದಾರೆ.

ಕಂಗನಾ ಅವರ ಈ ಹೇಳಿಕೆಗಳು ಈಗ ರಾಷ್ಟ್ರಮಟ್ಟದಲ್ಲಿ ದೊಡ್ಡ ಗದ್ದಲಕ್ಕೆ ಕಾರಣವಾಗಿವೆ. ಕಂಗನಾ ಅವರ ಈ ಮಾತುಗಳಿಗೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!