September 17, 2026

ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ  ಸೀರತ್ ಪ್ರಯುಕ್ತ ವಿಶೇಷ ಅಭಿಯಾನ

0
image_editor_output_image-620174255-1789634297471

ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಸೀರತ್ ಅಭಿಯಾನದ ಪ್ರಯುಕ್ತ ‘ವ್ಯಕ್ತಿತ್ವವೇ ಮೊದಲು: 30 ದಿನಗಳ ಪಯಣ’ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗಾಗಿ ಪ್ರಶಸ್ತಿ ವಿತರಣಾ ಕಾರ್ಯಕ್ರಮವು ನೆರವೇರಿತು.

ಕಾರ್ಯಕ್ರಮದ ಅಂಗವಾಗಿ, ಪಿಯುಸಿ ವಿದ್ಯಾರ್ಥಿನಿಯರಿಗೆ ಮೂವತ್ತು ದಿನಗಳ ಕಾಲ, ವಾರಕ್ಕೆ ಒಂದರಂತೆ ಒಟ್ಟು ನಾಲ್ಕು ವಿಷಯಾಧಾರಿತ ಥೀಮ್‌ಗಳನ್ನು ನೀಡಲಾಗಿತ್ತು. ಅವುಗಳೆಂದರೆ ಸೃಷ್ಟಿಕರ್ತನೊಂದಿಗಿನ ಸಂಬಂಧ, ಮನುಷ್ಯರೊಂದಿಗಿನ ಸಂಬಂಧ, ಕುಟುಂಬ ಮತ್ತು ಸಮಾಜದೊಂದಿಗಿನ ಸಂಬಂಧ ಹಾಗೂ ವ್ಯಕ್ತಿತ್ವ ವಿಕಸನ. ಈ ಥೀಮ್‌ಗಳಿಗೆ ಸಂಬಂಧಿಸಿದ  ವಿಷಯಗಳ ಕುರಿತು ವಿದ್ಯಾರ್ಥಿನಿಯರು ಚಾರ್ಟ್‌ಗಳನ್ನು ತಯಾರಿಸಿ, ತಮ್ಮ ಸೃಜನಶೀಲತೆ ಹಾಗೂ ಕಲಿಕೆಯನ್ನು ಪ್ರದರ್ಶಿಸಿದರು.

ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದ ವಿಟ್ಲದ ಜನಪ್ರಿಯ ಸ್ಕೂಲ್‌ನ ಶಿಕ್ಷಕಿ ಶ್ರೀಮತಿ ಅಶುರಾ ಬೀವಿ ಎನ್. ರವರು  ವಿದ್ಯಾರ್ಥಿನಿಯರ ಪ್ರಯತ್ನವನ್ನು ಅಭಿನಂದಿಸಿ, ಚಾರ್ಟ್‌ಗಳ ತಯಾರಿಕೆಯ ಸಂದರ್ಭದಲ್ಲಿ ಕಲಿತ ಮೌಲ್ಯಯುತ ಪಾಠಗಳನ್ನು ಕೇವಲ ಶೈಕ್ಷಣಿಕ ಚಟುವಟಿಕೆಗೆ ಸೀಮಿತಗೊಳಿಸದೆ, ತಮ್ಮ ನೈಜ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ಮೌಲ್ಯಗಳು ಇಹಲೋಕದ ಜೀವನದ ಜೊತೆಗೆ ಪರಲೋಕದ ಜೀವನಕ್ಕೂ ಮಾರ್ಗದರ್ಶಿಯಾಗಬೇಕು ಎಂದು  ಕಿವಿಮಾತು ಹೇಳಿದರು.

ಮತ್ತೋರ್ವ ತೀರ್ಪುಗಾರರಾದ ಜಮಾಅತೆ ಇಸ್ಲಾಮೀ ಹಿಂದ್‌ನ ಜಿಲ್ಲಾ ಸಂಯೋಜಕರು ಹಾಗೂ ‘ಅನುಪಮಾ’ ಮ್ಯಾಗಜಿನ್‌ನ ಸಂಯೋಜಕರಾದ ಸಾಜಿದ ಮೂಮಿನ್ ರವರು ವಿದ್ಯಾರ್ಥಿನಿಯರು ತಯಾರಿಸಿದ ಎಲ್ಲಾ ಚಾರ್ಟ್‌ಗಳು ಉತ್ತಮವಾಗಿದ್ದು, ಅವರ ಪರಿಶ್ರಮ ಶ್ಲಾಘನೀಯವಾಗಿದೆ ಎಂದು ಅಭಿನಂದಿಸಿದರು. ಮನುಷ್ಯನು ಜನಿಸಿದ ದಿನದಿಂದಲೇ ಕುಟುಂಬದ ಸದಸ್ಯರು ಪ್ರೀತಿ, ಕಾಳಜಿ ಮತ್ತು ಆರೈಕೆಯನ್ನು ನೀಡುತ್ತಾ ಬೆಳೆಸುತ್ತಾರೆ. ಪ್ರೌಢಾವಸ್ಥೆಗೆ ಬಂದ ನಂತರ ತಮ್ಮನ್ನು ಬೆಳೆಸಿದವರನ್ನು ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು  ತಿಳಿಸಿದರು. ಮನುಷ್ಯನನ್ನು ಸೃಷ್ಟಿಕರ್ತನು ಭೂಮಿಗೆ ಕಳುಹಿಸಿರುವ ಉದ್ದೇಶದ ಕುರಿತು ಚಿಂತನೆ ನಡೆಸಬೇಕು ಹಾಗೂ ಪ್ರತಿಯೊಬ್ಬರೊಂದಿಗೂ ಗೌರವ ಮತ್ತು ಉತ್ತಮ ರೀತಿಯಲ್ಲಿ ವರ್ತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಮತ್ತೋರ್ವ ತೀರ್ಪುಗಾರರಾದ ಆಯಿಷಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಆಯಿಷಾ ಫರ್ಜಾನಾ ರವರು ಮಾತನಾಡಿ, ಮೂವತ್ತು ದಿನಗಳ ಚಾರ್ಟ್ ತಯಾರಿಕೆ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಕಲಿತ ಪಾಠಗಳು ಅವರ ಜೀವನದ ಭಾಗವಾಗಬೇಕು. ಕಲಿಕೆಯ ನಿಜವಾದ ಉದ್ದೇಶ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ವಿಟ್ಲದ ಹೊರಿಝೋನ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಮುಹಮ್ಮದ್ ಮನಾಝಿರ್ ರವರು, ಅನುಗ್ರಹ ಮಹಿಳಾ ಕಾಲೇಜಿನ ಶಿಸ್ತು, ಸ್ವಚ್ಛತೆ ಹಾಗೂ ಅಚ್ಚುಕಟ್ಟಾದ ವಾತಾವರಣವನ್ನು ಶ್ಲಾಘಿಸಿದರು. ಅನುಗ್ರಹವು ಉತ್ತಮ ಕ್ಯಾಂಪಸ್ ಆಗಿದ್ದು, ವಿದ್ಯಾರ್ಥಿನಿಯರ ವ್ಯಕ್ತಿತ್ವ ವಿಕಸನಕ್ಕೆ ಹಲವು ಅವಕಾಶಗಳನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು. ವಿದ್ಯಾರ್ಥಿನಿಯರು ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಉತ್ತಮ ಮಾದರಿಯಾಗಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ಹೇಮಲತಾ ಬಿ. ಡಿ. ರವರು ಮಾತನಾಡಿ, ಜೀವನದಲ್ಲಿ ಹುಟ್ಟಿನಿಂದ ಮರಣದವರೆಗೆ ಮೌಲ್ಯಗಳು ಅತ್ಯಂತ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಮೌಲ್ಯಾಧಾರಿತ ಜೀವನವನ್ನು ನಡೆಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪಿಯುಸಿ ವಿಭಾಗದ ಚಾರ್ಟ್ ಸ್ಪರ್ಧೆ ಹಾಗೂ ಪದವಿ ವಿಭಾಗದ ಕ್ವಿಜ್ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಿ, ವಿಜೇತರಿಗೆ ಅಭಿನಂದನೆ ಸಲ್ಲಿಸಿ, ಇಂದಿನ ಕಾರ್ಯಕ್ರಮದ ಯಶಸ್ವಿಗೆ ಕಾರಣೀಕರ್ತರಾದ ಕಾಲೇಜಿನ ಆಡಳಿತ ಮಂಡಳಿ, ಮೌಲ್ಯ ಶಿಕ್ಷಣ ವಿಭಾಗದ ಉಪನ್ಯಾಸಕರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನುಗ್ರಹ ಆಡಳಿತ ಮಂಡಳಿಯ ಕೋಶಾಧಿಕಾರಿ ಹೈದರ್ ಆಲಿ ರವರು ಮಾತನಾಡಿ, ಇಂದಿನ ಕಾರ್ಯಕ್ರಮವು ವಿದ್ಯಾರ್ಥಿನಿಯರ ಕಲಿಕೆ, ಪರಿಶ್ರಮ ಹಾಗೂ ಸಾಧನೆಯನ್ನು ಸಂಭ್ರಮಿಸುವ ನಿಜವಾದ ಸಂದರ್ಭವಾಗಿದೆ. ವಿದ್ಯಾರ್ಥಿನಿಯರು ಕಲಿತ ಮೌಲ್ಯಗಳನ್ನು ತಮ್ಮ ನೈಜ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸಿನತ್ತ ಸಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೂವತ್ತು ದಿನಗಳ ಚಾರ್ಟ್ ತಯಾರಿಕಾ ಚಟುವಟಿಕೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು ತಮ್ಮ ಅನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು. ಹಾಗೂ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನೂಹ ಮರಿಯಮ್ ಹೈದರ್ ಮತ್ತು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಹಳೆ ವಿದ್ಯಾರ್ಥಿನಿ ರೀಹಾ ಅವ್ವ ಸೇರಿದಂತೆ, ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಹಾಗೂ ಅತಿಥಿ ಮತ್ತು ತೀರ್ಪುಗಾರರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಅನುಗ್ರಹ ಆಡಳಿತ ಮಂಡಳಿಯ ಅಧ್ಯಕ್ಷರಾದ ಜನಾಬ್ ಯಾಸೀನ್ ಬೇಗ್ ಉಪಸ್ಥಿತರಿದ್ದರು.

ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ನೂಹ ಮರಿಯಮ್ ಹೈದರ್ ಕಿರಾತ್ ಪಠಿಸಿ, ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ನೆಬಿಸತ್ ಹಿಬಾ ಸ್ವಾಗತಿಸಿ, ಪ್ರಥಮ ಬಿ.ಸಿ.ಎ. ವಿಭಾಗದ ವಿದ್ಯಾರ್ಥಿನಿ ಕುಮಾರಿ ತಸ್ನೀಮ್ ವಂದಿಸಿ, ತೃತೀಯ ಬಿ.ಎ. ವಿಭಾಗದ ವಿದ್ಯಾರ್ಥಿನಿ ಕುಮಾರಿ ಫಾತಿಮತ್ ಶಮಿಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!