September 17, 2026

ಬಂಟ್ವಾಳದ ಅಬ್ದುಲ್‌ ರಹ್ಮಾನ್‌ ಕೊಲೆ ಪ್ರಕರಣ:ಆರೋಪಿ ಭರತ್ ಕುಮ್ಡೇಲ್ ಸೇರಿದಂತೆ 8 ಮಂದಿಗೆ ಜಾಮೀನು

0
image_editor_output_image-1906371286-1789628494111

ಮೈಸೂರು : ಕೋಕಾ ಕಾಯ್ದೆಯಡಿ ಬಂಧಿತರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಮಂದಿ ಆರೋಪಿಗಳಿಗೆ ಮೈಸೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಬ್ದುಲ್ ರಹ್ಮಾನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಅಡಿ ಬಂಧಿತರಾಗಿದ್ದ ಭರತ್ ಕುಮ್ಡೇಲ್ ಸೇರಿದಂತೆ 8 ಮಂದಿಗೆ ಜಾಮೀನು ನೀಡಲಾಗಿದೆ.

ಪ್ರಕರಣದಲ್ಲಿ ಆರೋಪಿಗಳಾಗಿರುವ ಭರತ್, ಪ್ರದೀಪ್, ರಂಜಿತ್, ಶಿವಪ್ರಸಾದ್, ಅಭಿನ್ ರೈ, ಸಾಹಿತ್, ಸಚಿನ್ ಹಾಗೂ ತೇಜಾಕ್ಷ (ಆರೋಪಿ ಸ್ಥಾನ ಎ-6 ಮತ್ತು ಎ-7 ರಿಂದ ಎ-13) ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಕಲಂ 483ರ ಅಡಿಯಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.

ನ್ಯಾಯಾಂಗ ಬಂಧನ ವಿಸ್ತರಣೆ:

ನ್ಯಾಯಾಂಗ ಬಂಧನದಲ್ಲಿದ್ದ ಎ-1 ರಿಂದ ಎ-13 ರವರೆಗಿನ ಆರೋಪಿಗಳನ್ನು ಮಂಗಳವಾರ ತಾಂತ್ರಿಕ ಸಮಸ್ಯೆಯ ಕಾರಣ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ಸಾಧ್ಯವಾಗಲಿಲ್ಲ. ಜಾಮೀನಿನ ಮೇಲಿದ್ದ ಆರೋಪಿ ಎ-14 ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳ ರಿಮಾಂಡ್ ಅವಧಿಯನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸಿದೆ.

ಇದೇ ಪ್ರಕರಣದಲ್ಲಿ ಈ ಹಿಂದೆ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದ ಎ-15 ರಿಂದ ಎ-23 ರವರೆಗಿನ ಆರೋಪಿಗಳ ಪರವಾಗಿ ವಕೀಲರು ವಕಾಲತ್ತು ಮತ್ತು ಹೈಕೋರ್ಟ್ ಆದೇಶ ಪ್ರತಿಗಳನ್ನು ಸಲ್ಲಿಸಿದ್ದು, ಅವರಿಗೆ ಅಕ್ಟೋಬರ್ 15ರೊಳಗೆ ಜಾಮೀನು ರಹಿತ ವಾರಂಟ್ (ಎನ್‌ಬಿಡಬ್ಲ್ಯು) ಮರು ಜಾರಿ ಮಾಡಲು ನ್ಯಾಯಾಲಯ ಸೂಚಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿದೆ.

ಆರೋಪಿಗಳ ಪರವಾಗಿ ನ್ಯಾಯಾಲಯದಲ್ಲಿ ವಕೀಲರಾದ ಮಹೇಶ್ ಕೆ.ಜೆ ಹಾಗೂ ಪಿ.ಜೆ. ರಾಘವೇಂದ್ರ ಮೈಸೂರಿನಲ್ಲಿ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!