ಫೇಸ್ ಬುಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ನಿರ್ಬಂಧ: ಕ್ಷಮೆಯಾಚಿಸಿದ Meta
ನವದೆಹಲಿ: ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಿದ ಘಟನೆಗೆ ಸಂಬಂಧಿಸಿದಂತೆ ಮೆಟಾ ಸರ್ಕಾರದ ಕ್ಷಮೆಯಾಚಿಸಿದೆ, ತಾಂತ್ರಿಕ ದೋಷದಿಂದಾಗಿ ಈ ವೀಡಿಯೊ ತೆಗೆದುಹಾಕಲಾಗಿದೆ ಎಂದು ಕಂಪನಿ ಹೇಳಿದೆ ಎಂದು ಮೂಲಗಳು ತಿಳಿಸಿವೆ.
ತಾಂತ್ರಿಕ ದೋಷದಿಂದಾಗಿ ಫೇಸ್ ಬುಕ್ ನಿಂದ ಪ್ರಧಾನಿ ಮೋದಿ ಅವರ ವಿಡಿಯೋವನ್ನು ತೆಗೆದುಹಾಕಲಾಗಿದ್ದು, ಅದನ್ನು ಮರು ಸ್ಥಾಪಿಸಲಾಗಿದೆ ಎಂದು ಮೆಟಾ ವಕ್ತಾರ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದ ವಿಡಿಯೋವನ್ನು ದಿಢಿರನೆ ತೆಗೆದುಹಾಕಲಾಗಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮೆಟಾದ ವಿವರಣೆ ಮತ್ತು ವಿಡಿಯೋವನ್ನು ತೆಗೆದುಹಾಕಲು ಏನು ಕಾರಣ ಎಂಬ ಅಂಶದ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಫೇಸ್ ಬುಕ್ ನಿಂದ ವಿಡಿಯೋವನ್ನು ತೆಗೆದುಹಾಕಿರುವ ಕುರಿತು ಮೆಟಾ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಪ್ರತಿನಿಧಿಗಳಿಗೆ ವಿವರಣೆ ನೀಡುವಂತೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ವರದಿ ವಿವರಿಸಿದೆ.
ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಜೆನ್ ಝೀ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ವಿಡಿಯೋವನ್ನು ಜುಲೈ 23ರಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾಗಿತ್ತು.




