ಮಂಗಳೂರು: 2014ರ ಗಂಗಾಧರ ಪಾಂಗಳ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಮಂಗಳೂರು: 2014 ರಲ್ಲಿ ನಡೆದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮೊಗವೀರ ಸಮುದಾಯದ ಮುಖಂಡ ಗಂಗಾಧರ ಪಾಂಗಳ ಅವರ ಹತ್ಯೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ . ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸತೀಶ್ ಬೈಕಂಪಾಡಿ(58), ಹರೀಶ್ ಬೈಕಂಪಾಡಿ(60) ಭಾಸ್ಕರ್ ಬೈಕಂಪಾಡಿ(61) ಪುಪ್ಪರಾಜ್ (47) ಜೀವಾವಧಿ ಶಿಕ್ಷೆಗೊಳಗಾದ ಆರೋಪಿಗಳು.
ಗಂಗಾಧರ ಪಾಂಗಳರವರ ಕೊಲೆ ಪ್ರಕರಣದ 1 ನೇ ಆರೋಪಿ ಸತೀಶ್ ಬೈಕಂಪಾಡಿ ಎಂಬಾತನನ್ನು ಬೈಕಂಪಾಡಿ ಮೊಗವೀರ ಮಹಾಸಭಾದ ಸದಸ್ಯತ್ವದಿಂದ ಅಮಾನತುಪಡಿಸಲು ಮೃತ ಗಂಗಾಧರ ಪಾಂಗಾಳರವರೇ ಮೂಲ ಕಾರಣ ಕರ್ತರೆಂದು ಭಾವಿಸಿ ಅವರ ಮೇಲೆ ದ್ವೇಷ ಸಾಧಿಸಿದ ಆರೋಪಿತರುಗಳು ಪೂರ್ವ ನಿಯೋಜಿತ ಒಳಸಂಚು ರೂಪಿಸಿ ಬೊಲೇರೋ ವಾಹನ ಮೂಲಕ ಗಂಗಾಧರ ಪಾಂಗಾಳ ರವರ ಸ್ಕೂಟರ್ ಗೆ ಉದ್ದೇಶ ಪೂರ್ವಕವಾಗಿ ಹಿಂದಿನಿಂದ ಹಿಂಬಾಲಿಸಿ ಬಂದು ಡಿಕ್ಕಿ ಹೊಡೆಸಿದ್ದು ಗಂಗಾಧರ ಪಾಂಗಾಳರವರು ಕೆಳಗೆ ಬಿದ್ದು ತಲೆ ,ಮೈ ಕೈಗೆ ಪೆಟ್ಟಾಗಿ ಮೃತಪಟ್ಟ ಬಗ್ಗೆ ಧೃಢಪಡಿಸಿಕೊಂಡ ನಂತರ ಆರೋಪಿತರುಗಳು ತಾವು ಬಂದ ವಾಹನದ ಸಮೇತ ಸ್ಥಳದಿಂದ ಪರಾರಿಯಾಗಿದ್ದರು.
ಈ ಬಗ್ಗೆ ತನಿಖೆ ಕೈಗೊಂಡು 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದ.ಕ ಮಂಗಳೂರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರು ಜುಲೈ 27 2026 ರಂದು ಆರೋಪಿತರ ವಿರುದ್ಧ ಆರೋಪ ಸಾಬೀತಾದ ಕಾರಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಆರೋಪಿತರಾದ A1. ಸತೀಶ್ ಬೈಕಂಪಾಡಿ A3. ಹರೀಶ್ ಬೈಕಂಪಾಡಿ A4. ಭಾಸ್ಕರ್ ಬೈಕಂಪಾಡಿ (ಈ 03 ಜನ ಆರೋಪಿಗಳು ಸಹೋದರರು.) ಇವರು ಪಣಂಬೂರು ಠಾಣಾ ವ್ಯಾಪ್ತಿಯ ಮೀನಕಳಿಯ ವಾಸಿಗಳಾಗಿದ್ದು, ಹಾಗು ಮತ್ತೊಬ್ಬ ಆರೋಪಿ A2 ಪುಷ್ಪರಾಜ್ ಈತನು ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದವನು. ಎಲ್ಲಾ 04 ಜನ ಆರೋಪಿಗಳಿಗೆ ನ್ಯಾಯಾಧೀಶರಾದ ಜಗದೀಶ್. ವಿ ಎನ್ ರವರು ಶಿಕ್ಷೆಯನ್ನು ಪ್ರಕಟಿಸಿ ಆದೇಶಿಸಿದರು.
ಆರೋಪಿಗಳಾದ ಸತೀಶ್ ಬೈಕಂಪಾಡಿ, ಹರೀಶ್ ಬೈಕಂಪಾಡಿ, ಆರೋಪಿ ಭಾಸ್ಕರ್ ಬೈಕಂಪಾಡಿ ರವರುಗಳಿಗೆ ಕಲಂ:302, 120, 109 ಜೊತೆ 34 ಐಪಿಸಿ ರಲ್ಲಿ ಜೀವಾವಧಿ ಶಿಕ್ಷೆ ಮತ್ತು15 ಸಾವಿರ ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ವರ್ಷ ಹೆಚ್ಚುವರಿ ಸಾದಾಶಿಕ್ಷೆ ಮತ್ತು ಪ್ರಕರಣದಲ್ಲಿ ಆರೋಪಿ ಪುಷ್ಪರಾಜ್ ಎಂಬಾತನಿಗೆ ಕಲಂ:302, 120, ಜೊತೆ 34 ಐಪಿಸಿ ರಲ್ಲಿ ಜೀವಾವಧಿ ಶಿಕ್ಷೆ ಮತ್ತು 15,000 ದಂಡ ಪಾವತಿಸಲು ತಪ್ಪಿದ್ದಲ್ಲಿ 1 ವರ್ಷ ಹೆಚ್ಚುವರಿ ಸಾದಾಶಿಕ್ಷೆ ಹಾಗು ಕಲಂ 201 r/w 34 IPC ಕಲಂನಡಿ ಎಲ್ಲಾ ಆರೋಪಿತರಿಗೆ ಎರಡು ವರ್ಷ ಸಾದಾ ಶಿಕ್ಷೆ ಮತ್ತು ತಲಾ 1000 ದಂಡ, ದಂಡ ಪಾವತಿಸಲು ತಪ್ಪಿದರೆ ಒಂದು ತಿಂಗಳ ಹೆಚ್ಚುವರಿ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಅಲ್ಲದೇ 60000 ರೂಪಾಯಿ ವಿಧಿಸಿದ ದಂಡದ ಪೈಕಿ ರೂ 50000 ನ್ನು ಪರಿಹಾರವಾಗಿ ಮೃತನ ಮಗಳಿಗೆ ಮತ್ತು 16000 ರೂ ನ್ನು ಸರ್ಕಾರಕ್ಕೆ ಪಾವತಿಸಲು ಆದೇಶಿಸಲಾಗಿದೆ.
ಕೃತ್ಯಕ್ಕೆ ಬಳಸಿದ ಆರೋಪಿತರಿಗೆ ಸೇರಿದ ಬೊಲೆರೋ, ರೀಡ್ಝ್ ಹಾಗೂ ಮಾರುತಿ ಕಾರನ್ನು ವಶಕ್ಕೆ ಪಡೆದು ಸರ್ಕಾರಕ್ಕೆ ಮುಟ್ಟಗೋಲು ಹಾಕಲು ಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ 04 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತನಿಖೆಯನ್ನು ಪಣಂಬೂರು ಪೊಲೀಸ್ ಠಾಣೆಯ ಅಗಿನ ಪೊಲೀಸ್ ನಿರೀಕ್ಷಕರುಗಳಾದ ಎನ್.ಆರ್ ಮುಕ್ರಿ, ಭಾಸ್ಕರ್ ರೈ, ರವೀಶ್ ನಾಯಕ್ ರವರುಗಳು ಭಾಗಶಃ ತನಿಖೆ ನಡೆಸಿದ್ದು, ಲೋಕೇಶ್ ಎ.ಸಿ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ ನಾಯಕ ರವರು ವಾದ ಮಂಡಿಸಿದರು.




