ವಿದೇಶಗಳಿಂದ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು: ಮೂವರು ವಿದೇಶಿ ಪ್ರಜೆಗಳು ಸಹಿತ 17 ಮಂದಿ ಆರೋಪಿಗಳ ಬಂಧನ
ಬೆಂಗಳೂರು: ನೆರೆಹೊರೆಯ ರಾಜ್ಯ ಹಾಗೂ ವಿದೇಶಗಳಿಂದ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ಡ್ರಗ್ಸ್ ಜಾಲವನ್ನು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆಯ ಮೂಲಕ ಪತ್ತೆಮಾಡಲಾಗಿದೆ.
ನಗರದಾದ್ಯಂತ ನಡೆಸಲಾದ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಬರೋಬ್ಬರಿ 25 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಮೂವರು ವಿದೇಶಿ ಪ್ರಜೆಗಳು ಸೇರಿ ಒಟ್ಟು 17 ಮಂದಿ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸರು ನಡೆಸಿದ ಮೆಗಾ ಅಪರೇಷನ್ ಮೂಲಕ ಬೃಹತ್ ಡ್ರಗ್ಸ್ ಜಾಲ ಪತ್ತೆ ಮಾಡಿದ್ದಾರೆ. ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ಎಂಡಿಎಂಎ ಕ್ರಿಸ್ಟಲ್ ಅನ್ನು ಲಗೇಜ್ ಬ್ಯಾಗ್‌ನ ಒಳಗೆ ಅಡಗಿಸಿಟ್ಟುಕೊಂಡು ಬೆಂಗಳೂರಿಗೆ ತರುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ, ಆರೋಪಿಗಳಿಂದ ಕೆಜಿಗಟ್ಟಲೆ ಎಂಡಿಎಂಎ ಕ್ರಿಸ್ಟಲ್ ಹಾಗೂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲಕೊನೇಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಇವರಿಂದ ಬರೋಬ್ಬರಿ 21 ಕೋಟಿ ರೂ. ಮೌಲ್ಯದ 10 ಕೆಜಿ 270 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್ ಅನ್ನು ಸೀಜ್ ಮಾಡಲಾಗಿದೆ.
ಇನ್ನು ಈ ಮಹಾ ದಂಧೆಯ ಹಿಂದಿರುವ ಮುಖ್ಯ ಕಿಂಗ್‌ಪಿನ್‌ಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.




