ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್ ನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಾಟ: ಮೂವರು ಆರೋಪಿಗಳು ಸಹಿತ 1.58 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ
ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಮಾದಕವಸ್ತುವನ್ನು ಅಡಗಿಸಿಟ್ಟು ಮಂಗಳೂರಿಗೆ ಸಾಗಿಸಿ, ಮಂಗಳೂರು ಹಾಗೂ ಕೇರಳದ ವಿವಿಧೆಡೆ ಮಾರಾಟ ಮಾಡಲು ಸಂಚು ರೂಪಿಸಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ, ₹1.58 ಕೋಟಿ ಮೌಲ್ಯದ 1 ಕೆ.ಜಿ. 796.96 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಅಕ್ಟೋಬರ್ 8ರಂದು ರಾತ್ರಿ 10 ಗಂಟೆಗೆ ಉಳ್ಳಾಲ ತಾಲೂಕಿನ ಕುಂಪಲದ ಡಿಮಾರ್ಟ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಎಂಡಿಎಂಎ, ಮೂರು ಮೊಬೈಲ್ ಫೋನ್‌ಗಳು, ಸಾಗಾಟಕ್ಕೆ ಬಳಸಿದ ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಆಟೋ ರಿಕ್ಷಾ, ಕೋರಿಯರ್ ರಟ್ಟಿನ ಬಾಕ್ಸ್ ಹಾಗೂ ವಾಟರ್ ಪ್ಯೂರಿಫೈಯರ್ ಸೇರಿದಂತೆ ಒಟ್ಟು ₹1,63,84,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಕಾಸರಗೋಡು ಜಿಲ್ಲೆಯ ಮಂಗಳಪಾಡಿಯ ಅಬ್ದುಲ್ ಹಾಪೀಲ್ (25), ಮಂಗಳೂರಿನ ಕೂಳೂರು ನಿವಾಸಿ ಜಿಯಾವುಲ್ ಹಕ್ (30) ಹಾಗೂ ಪಾಂಡೇಶ್ವರದ ಅಲ್ತಾಫ್ (28) ಎಂದು ಗುರುತಿಸಲಾಗಿದೆ.
ಆರೋಪಿಗಳು ಪಂಜಾಬ್‌ನ ಅಮೃತಸರದಿಂದ ಎಂಡಿಎಂಎ ಖರೀದಿಸಿ, ವಾಟರ್ ಪ್ಯೂರಿಫೈಯರ್‌ನ ನೀರು ಸಂಗ್ರಹಿಸುವ ಭಾಗದಲ್ಲಿ ಅಡಗಿಸಿ ಕೋರಿಯರ್ ಮೂಲಕ ಮಂಗಳೂರಿಗೆ ಕಳುಹಿಸಲು ಯೋಜಿಸಿದ್ದರು. ಬಳಿಕ ಮಂಗಳೂರು ನಗರ ಹಾಗೂ ಕೇರಳದ ವಿವಿಧ ಪ್ರದೇಶಗಳಿಗೆ ಪೂರೈಕೆ ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಅಬ್ದುಲ್ ಹಾಪೀಲ್ ಮತ್ತು ಅಲ್ತಾಫ್ ವಿರುದ್ಧ ಈ ಹಿಂದೆ ಮಾದಕವಸ್ತು ಸೇವನೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದ್ದರೆ, ಜಿಯಾವುಲ್ ಹಕ್ ದುಬೈನ ರಸ್ ಅಲ್ ಖೈಮಾದಲ್ಲಿ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾನೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.






