April 12, 2026

ನೇರಳಕಟ್ಟೆ: ಸಹಕಾರಿ ಸಂಘದಲ್ಲಿ ಪ.ಜಾತಿ ಮಹಿಳೆಗೆ ಜಾತಿ ನಿಂದನೆ ಹಾಗೂ ಕಿರುಕುಳ, ಮೂವರ ವಿರುದ್ಧ ಪ್ರಕರಣ ದಾಖಲು

0
IMG-20260412-WA0065

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಣಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪ.ಜಾತಿ  ಮಹಿಳೆಗೆ ಜಾತಿ ನಿಂದನೆ ಮಾಡಿ, ಮಾನಸಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ:
ನೆಟ್ಲಮುಡ್ನೂರು ಗ್ರಾಮದ ನೆಕ್ಕರೆಮಠ ನಿವಾಸಿ, ಪರಿಶಿಷ್ಟ ಜಾತಿಯ ಶೇಷಮ್ಮ (47) ಎಂಬುವವರು ಕಳೆದ 24 ವರ್ಷಗಳಿಂದ ನೆಟ್ಲಮುಡ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಾಖೆಯಲ್ಲಿ ಸಮೂಹ ಕಾಯಕ (ಸೇವಕಿ) ಕೆಲಸ ಮಾಡುತ್ತಿದ್ದರು. ಫಿರ್ಯಾದಿದಾರರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಅವರ ವಿರುದ್ಧ ದ್ವೇಷಪೂರಿತವಾಗಿ ನಡೆದುಕೊಳ್ಳುತ್ತಿದ್ದರು.

ದೂರಿನಲ್ಲಿ ಉಲ್ಲೇಖಿಸಲಾದ ಅಂಶಗಳ ಪ್ರಕಾರ ಮಾರ್ಚ್ 29, ರಂದು ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ ಅವರು ಶೇಷಮ್ಮ ಅವರಿಗೆ ಕರೆ ಮಾಡಿ, ಜಾತಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಏಪ್ರಿಲ್ 1 ರಂದು ಶೇಷಮ್ಮ ಅವರು ಕೆಲಸಕ್ಕೆ ಹೋದಾಗ ಯಾವುದೇ ಮುನ್ಸೂಚನೆ ನೀಡದೆ ಅವರನ್ನು ಕೆಲಸದಿಂದ ಅಮಾನತು ಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಅಲ್ಲದೆ, ಏಪ್ರಿಲ್ 4 ರಂದು ಅವರು ಕಚೇರಿಗೆ ಹೋದಾಗ ಶಾಖಾ ವ್ಯವಸ್ಥಾಪಕ ಯತೀಶ್ ಗೌಡ ಅವರು “ನೀನು ನಲಿಕೆ ಕೆಳಜಾತಿಯವಳು, ನಿನಗೆ ಇಲ್ಲಿ ಕೆಲಸ ಇಲ್ಲ” ಎಂದು ಹೇಳಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಸರಣಿ ಘಟನೆಗಳಿಂದ ಮನನೊಂದ ಶೇಷಮ್ಮ ಅವರು ಮಾನಸಿಕವಾಗಿ ಜರ್ಜರಿತರಾಗಿ, ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ತಮಗೆ ನ್ಯಾಯ ಒದಗಿಸಬೇಕೆಂದು ಕೋರಿ ಏಪ್ರಿಲ್ 11 ರಂದು ಪೊಲೀಸರ ಮೊರೆ ಹೋಗಿದ್ದಾರೆ.‌

ಶೇಷಮ್ಮ ಅವರು ನೀಡಿದ ದೂರಿನ ಪ್ರಕಾರ, ಆರೋಪಿಗಳು ಕಚೇರಿಯ ಕೆಲಸದ ವಿಚಾರದಲ್ಲಿ ತಾರತಮ್ಯ ಎಸಗಿದ್ದಲ್ಲದೆ, ಇತರ ಸಿಬ್ಬಂದಿಗಳ ಮುಂದೆ ದೂರುದಾರರ ಜಾತಿಯನ್ನು ಎತ್ತಿ ಹಿಡಿದು ಅವಮಾನಿಸಿದ್ದಾರೆ. ಅಲ್ಲದೆ, ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಶೇಷಮ್ಮ ಅವರು ವಿಟ್ಲ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ನೆರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಪುಷ್ಪರಾಜ್ ಚೌಟ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಶೋದಾ ಮತ್ತು ಶಾಖಾ ವ್ಯವಸ್ಥಾಪಕ ಯತೀಶ್ ಡಿ. ಗೌಡ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 74, 49 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ (SC/ST Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಸ್ತುತ ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಅವರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಪ್ರಸ್ತುತ ಪೊಲೀಸರು ಘಟನಾ ಸ್ಥಳದ ಮಹಜರು ನಡೆಸಿ, ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!