ಸಂಘಪರಿವಾರದ ದೇಶಪ್ರೇಮ ದೇಶಕ್ಕೆ ಅಗತ್ಯವಿಲ್ಲ: ಸಿಪಿಐ(ಎಂ) ಮುಖಂಡ ಯಾದವ ಶೆಟ್ಟಿ
ಬೆಳ್ತಂಗಡಿ: ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಕಮ್ಯೂನಿಸ್ಟ್ ಪಕ್ಷವು ದೇಶಪ್ರೇಮಿ ರಾಜಕೀಯ ಪಕ್ಷವಾಗಿದೆ. 1925 ರಲ್ಲಿ ಸ್ಥಾಪನೆಯಾದ RSS ಬ್ರಿಟಿಷರ ಗುಲಾಮಗಿರಿಗೆ ಒಳಪಟ್ಟ ದೇಶದ್ರೋಹಿ ಸಂಘಟನೆಯಾಗಿದೆ. ಇಂತಹ ಸಂಘಪರಿವಾರದಿಂದ ದೇಶಪ್ರೇಮದ ಅಗತ್ಯ ದೇಶಕ್ಕೆ ಇಲ್ಲ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಕೆ.ಯಾದವ ಶೆಟ್ಟಿ ಹೇಳಿದರು.
ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿಯ 9 ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹುಸಿ ದೇಶಪ್ರೇಮದ ಭಾವನಾತ್ಮಕ ವಿಚಾರವನ್ನು ಮುಂದಿಟ್ಟು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಡೀ ದೇಶದ ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡಿದೆ. ಬೆಲೆ ಏರಿಕೆ, ಆರ್ಥಿಕತೆ ಕುಸಿತ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ಜನತೆ ತತ್ತರಿಸಿದ್ದು, ಜನರ ಗಮನ ಬೇರೆಡೆಗೆ ಸೆಳೆಯಲು ಗೋವು, ಮತಾಂತರ, ಲವ್ ಜಿಹಾದ್ ಹೆಸರಿನಲ್ಲಿ ಕೆರಳಿಸುವ ಮೂಲಕ ದಾರಿ ತಪ್ಪಿಸಲಾಗುತ್ತಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದು ಹೇಳಿದರು.
ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ ಸಿಪಿಐ(ಎಂ) ಪ್ರಜಾಸತ್ತಾತ್ಮಕ ರೀತಿಯಲ್ಲಿ ಸಮ್ಮೇಳನ ನಡೆಸುವ ಏಕೈಕ ಪಕ್ಷವಾಗಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಹೈಕಮಾಂಡ್ ಸಂಸ್ಕೃತಿಯ ಪಕ್ಷಗಳಾಗಿದೆ. ದೇಶವನ್ನು ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಪಕ್ಷದ ಆಡಳಿತ ಅತ್ಯಂತ ಅಪಾಯಕಾರಿಯಾಗಿದೆ ಎಂದು ಆರೋಪಿಸಿದ ಅವರು ರೈತ ಕಾರ್ಮಿಕರ ಪರವಾದ ಕಾನೂನುಗಳನ್ನು ಮಾಲೀಕರ, ಭೂಮಾಲೀಕರ ಪರವಾಗಿ ಬದಲಾವಣೆ ಮಾಡುವ ಮೂಲಕ ಈ ಸರ್ಕಾರ ಅವರ ಏಜೆಂಟ್ ಆಗಿ ವರ್ತಿಸುತ್ತಿದೆ. ರೈತರು ಕಳೆದ 11 ತಿಂಗಳುಗಳ ಕಾಲ ಹೋರಾಟ ನಡೆಸುತ್ತಿದ್ದರೂ ತಮ್ಮ ಫ್ಯಾಸಿಸ್ಟ್ ಧೋರಣೆಯ ಭಾಗವಾಗಿ ಚಳವಳಿ ನಿರತರನ್ನು ಹತ್ಯೆಗೈಯ್ಯಲಾಗುತ್ತಿದೆ ಎಂದರು. ಈ ಸರ್ಕಾರದ ವಿರುದ್ಧ ರೈತ-ಕಾರ್ಮಿಕರು ಒಂದಾಗಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹರಿದಾಸ್ ಎಸ್. ಎಂ ಸಮ್ಮೇಳನಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಜಯಂತಿ ನೆಲ್ಲಿಂಗೇರಿ ಉಪಸ್ಥಿತರಿದ್ದರು. ಮೊದಲಿಗೆ ಹಿರಿಯ ನಾಯಕ ಪರಮೇಶ್ವರ ನಾಯರ್ ಧ್ವಜಾರೋಹಣ ಮಾಡಿದರು. ಪಕ್ಷದ ಕಾರ್ಯದರ್ಶಿ ಶಿವಕುಮಾರ್ ಎಸ್. ಎಂ ಸ್ವಾಗತಿಸಿ , ಮುಖಂಡರಾದ ವಸಂತ ನಡ ಶ್ರದ್ಧಾಂಜಲಿ ನಿರ್ಣಯ ಮಂಡಿಸಿದರು. ಶೇಖರ್ ಲಾಯಿಲ ವಂದಿಸಿದರು.






