ಕಮ್ಯೂನಿಸ್ಟರ ಹೋರಾಟದಿಂದ ಆದಿವಾಸಿಗಳಿಗೆ ನೆಮ್ಮದಿಯ ಬದುಕು: ವಿಠ್ಠಲ ಮಲೆಕುಡಿಯ
ಬೆಳ್ತಂಗಡಿ: ಕಮ್ಯೂನಿಸ್ಟ್ ಪಕ್ಷ ಸೇರಿದಂತೆ ಎಡಪಂಥೀಯ ಹೋರಾಟದಿಂದಾಗಿ ಮೂರು ತಿಂಗಳ ಕಾಲ ಜೈಲಿನಲ್ಲಿದ್ದರೂ, ಮನೆಯಲ್ಲಿದ್ದ ಅನುಭವ ಉಂಟಾಗಿತ್ತು. ಎಡಪಂಥೀಯ ಹೋರಾಟದಿಂದ ಇಡೀ ಕುದುರೆಮುಖ ರಾಷ್ಟ್ರೀಯ ಉದ್ಯಾನವನವಾಸಿಗಳು ಇಂದು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ಪತ್ರಕರ್ತ, ನಕ್ಸಲ್ ಆರೋಪ ಹೊತ್ತು ನ್ಯಾಯಾಲಯದಿಂದ ನಿರ್ದೂಷಿಯಾದ ವಿಠ್ಠಲ ಮಲೆಕುಡಿಯ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಿಪಿಐ(ಎಂ) ಹಾಗೂ ಎಡಪಂಥೀಯ ಸಂಘಟನೆಗಳ ಗೌರವಾರ್ಪಣೆ ಸ್ವೀಕರಿಸಿ ಮಾತನಾಡುತ್ತಿದ್ದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಹಾಗೂ ಒಕ್ಕಲೆಬ್ಬಿಸುವ ವಿರುದ್ಧ ಧ್ವನಿ ಎತ್ತಿದ ಕಾರಣದಿಂದಾಗಿ ಚಹಾ ಹುಡಿ, ಸಕ್ಕರೆ ತಟ್ಟೆ, ಚಾಪೆ ಮುಂತಾದ ನಿತ್ಯೋಪಯೋಗಿ ವಸ್ತುಗಳು, ಆಟಿಕೆ ಬೈನಾಕೂಲರ್, ಭಗತ್ ಸಿಂಗ್ ಪುಸ್ತಕ ಮನೆಯಲ್ಲಿ ಸಿಕ್ಕಿದೆ ಎಂದು ನನ್ನ ಹಾಗೂ ತಂದೆಯ ಮೇಲೆ ದೇಶದ್ರೋಹದ ಆರೋಪ ಹೊರಿಸಿದ ಎಎನ್ಎಫ್ ಪೋಲಿಸರಿಗೆ ಹಾಗೂ ಅಂದಿನ ಸರ್ಕಾರಕ್ಕೆ ಈ ತೀರ್ಪು ಹಿನ್ನಡೆ ಹಾಗೂ ಮುಖಭಂಗವಾಗಿದೆ ಎಂದ ಅವರು, ಅಂದು ನಮ್ಮ ಕುಟುಂಬ ಅತ್ಯಂತ ಸಂಕಷ್ಟ ಸವಾಲುಗಳನ್ನು ಎದುರಿಸಿತು ಎಂದು ಘಟನೆಗಳನ್ನು ವಿವರಿಸಿದ ಅವರು ನಮ್ಮ ಕುಟುಂಬಕ್ಕೆ ಬೆಂಬಲ ನೀಡಿದ ಸಿಪಿಐ(ಎಂ) ಸಂಸದ, ಪ್ರಸ್ತುತ ಕೇರಳ ಸ್ಪೀಕರ್ ಎಂ.ಬಿ ರಾಜೇಶ್, ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಕಾಶ್ ಕಾರಾಟ್, ಬೃಂದಾ ಕಾರಾಟ್ ಸೇರಿದಂತೆ ಎಲ್ಲಾ ಎಡಪಂಥೀಯ ನಾಯಕರು, ಪ್ರಗತಿಪರ ಚಳವಳಿಗೆ ಕೃತಜ್ಞತೆ ಸಲ್ಲಿಸಿದ ವಿಠ್ಠಲ ಮಲೆಕುಡಿಯ ಅವರು ನಾವು ಅಂದು ಇಟ್ಟಿರುವ ಬೇಡಿಕೆಗಳು ಇಂದೂ ಈಡೇರಿಸಲು ಸರಕಾರಗಳು ವಿಫಲವಾಗಿದೆ. ಇದರ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ಶೇಖರ್ ಲಾಯಿಲ ರವರು ವಿಠ್ಠಲ ಮಲೆಕುಡಿಯ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪು ದೇಶದ ಜನಪರ ಚಳವಳಿಗೆ ಸ್ಪೂರ್ತಿಯಾಗಿದೆ. ಬಿಜೆಪಿ ಸರ್ಕಾರ ತನ್ನ ಆಡಳಿತದ ವಿರುದ್ಧ ಧ್ವನಿ ಎತ್ತುವವರನ್ನು ದಮನಿಸುವ ಫ್ಯಾಸಿಸ್ಟ್ ಧೋರಣೆಯ ಭಾಗವಾಗಿ 2012 ರಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಮಲೆಕುಡಿಯ ಕುಟುಂಬದ ವಿರುದ್ಧ ಸುಳ್ಳು ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಯಿತು. ಇಂತಹ ಸಂದರ್ಭದಲ್ಲಿ ಎಡಪಂಥೀಯ ಸಂಘಟನೆಗಳು ನಿರಂತರ ಹೋರಾಟ ನಡೆಸಿತು ಎಂದು ನೆನಪಿಸಿದ ಅವರು ವಿಠಲ ಮಲೆಕುಡಿಯ ಅವರ ಮುಂದಿನ ಕಾನೂನು ಹೋರಾಟದ ಪರ ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಆದಿವಾಸಿಗಳ ಸಮಸ್ಯೆಗಳ ವಿರುದ್ಧದ ಹೋರಾಟದಲ್ಲಿ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಹೇಳಿದರು. 9 ವರ್ಷಗಳ ನಂತರ ನ್ಯಾಯಾಲಯ ನೀಡಿದ ತೀರ್ಪು ಸಂಘಪರಿವಾರ ಹಾಗೂ ಬಿಜೆಪಿ, ಎಎನ್ಎಫ್ ಪೋಲಿಸರ ಧಮನಕಾರಿ ನೀತಿಯ ವಿರುದ್ಧ ಛಡಿಯೇಟು ಎಂದು ಹೇಳಿದರು. ವಿಠ್ಠಲ ಮಲೆಕುಡಿಯ ಜೊತೆಗೆ ಅವರ ತಂದೆ ನಿಂಗಣ್ಣ ಮಲೆಕುಡಿಯ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿದಾಸ್ ಎಸ್ ಎಂ ವಹಿಸಿದ್ದರು. ವೇದಿಕೆಯಲ್ಲಿ ಸಿಪಿಐ(ಎಂ) ರಾಜ್ಯ ಮುಖಂಡರಾದ ವಸಂತ ಆಚಾರಿ, ಯಾದವ ಶೆಟ್ಟಿ, ಶಿವಕುಮಾರ್ ಎಸ್. ಎಂ, ಜಯಂತಿ ನೆಲ್ಲಿಂಗೇರಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷ ವಸಂತ ನಡ, ಕಾರ್ಯದರ್ಶಿ ಜಯಾನಂದ ಪಿಲಿಕಲ, ಮುಖಂಡರಾದ ಪೂವಪ್ಪ ಮಲೆಕುಡಿಯ ಕುತ್ಲೂರು, ಸುಂದರ ಮಲೆಕುಡಿಯ ನೆರಿಯ, ನಾರಾಯಣ ಮಲೆಕುಡಿಯ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.





