ಧರ್ಮಸ್ಥಳ ಪ್ರಕರಣ: ಮಾಸ್ಕ್ ಮ್ಯಾನ್ ಚಿನ್ನಯ್ಯ ಶಿವಮೊಗ್ಗ ಜೈಲಿನಿಂದ ರಿಲೀಸ್
ಶಿವಮೊಗ್ಗ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದ ಚಿನ್ನಯ್ಯ ಜಾಮೀನ ಮಂಜೂರಾಗಿ 24 ದಿನಗಳ ಬಳಿಕ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಗುರುವಾರ ಬಿಡುಗಡೆಗೊಂಡಿದ್ದಾನೆ.
ಗುರುವಾರ ಬೆಳಗ್ಗೆ ಆತನ ಪತ್ನಿ, ಸಹೋದರಿ ಮತ್ತು ವಕೀಲರು ಚಿನ್ನಯ್ಯನನ್ನು ಜೈಲಿನಿಂದ ಕರೆದೊಯ್ದರು.
ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಬಳಿಕ ಆರೋಪಿಯಾಗಿ ಜೈಲು ಸೇರಿದ್ದ ಚಿನ್ನಯ್ಯ ನಾಲ್ಕು ತಿಂಗಳಿನಿಂದ ಜೈಲಿನಲ್ಲಿದ್ದ. ಚಿನ್ನಯ್ಯನಿಗೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯವು ನ.24ರಂದು 12 ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಬಾಂಡ್ ಮತ್ತು ಶೂರಿಟಿ ನೀಡಲು ಯಾರೂ ಮುಂದೆ ಬಾರದ ಕಾರಣ ಬಿಡುಗಡೆ ಸಾಧ್ಯವಾಗಿರಲಿಲ್ಲ.
ಬುಧವಾರ ಆತನ ಪತ್ನಿ ಮಲ್ಲಿಕಾ ಒಂದು ಲಕ್ಷ ರೂ. ಬಾಂಡ್ ಮತ್ತು ಇಬ್ಬರು ಜಾಮೀನುದಾರರೊಂದಿಗೆ ಬೆಳ್ತಂಗಡಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯಕ್ಕೆ ಶೂರಿಟಿ ಕೊಡಿಸಿ ಕಾನೂನು ಪ್ರಕ್ರಿಯೆ ಪೂರೈಸಿದ್ದಾರೆ.
ಚಿನ್ನಯ್ಯನ ಬಿಡುಗಡೆ ಹಿನ್ನೆಲೆಯಲ್ಲಿ ಇಲ್ಲಿನ ಸೋಗಾನೆಯ ಕೇಂದ್ರ ಕಾರಾಗೃಹದ ಬಳಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಜೈಲಿನ ಆವರಣಕ್ಕೆ ತೆರಳಲು ಮಾಧ್ಯಮದವರಿಗೆ ನಿರ್ಬಂಧ ವಿಧಿಸಲಾಗಿತ್ತು. ಬುಧವಾರ ಸಂಜೆಯೇ ಕಾರಾಗೃಹಕ್ಕೆ ಕೋರ್ಟ್ ಆದೇಶ ಬಂದಿತ್ತು.
ಇದರಿಂದ ಇಂದು ಬೆಳಗ್ಗೆ ಜೈಲಿನಿಂದ ಚಿನ್ನಯ್ಯ ಬಿಡುಗಡೆ ಆಗಿದ್ದಾನೆ. ಈತ ಪ್ರತಿ ಎರಡು ದಿನಕ್ಕೊಮ್ಮೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು. ಹಾಗೂ ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂದು ಬೆಳ್ತಂಗಡಿ ನ್ಯಾಯಾಲಯವು ಷರತ್ತು ವಿಧಿಸಿದೆ.





