ಮದುವೆಯಾದ ಎರಡೇ ತಿಂಗಳಿಗೆ ಬಾಯ್ ಪ್ರೆಂಡ್ ಜೊತೆ ಪತ್ನಿ ಪರಾರಿ: ಮನನೊಂದು ಪತಿ ಆತ್ಮಹತ್ಯೆ
ದಾವಣಗೆರೆ: ಅದ್ಧೂರಿಯಾಗಿ ಮದುವೆಯಾದ ಎರಡೇ ತಿಂಗಳಿಗೆ ಹೆಂಡತಿ ಬಾಯ್ ಪ್ರೆಂಡ್ ಜೊತೆ ಪರಾರಿಯಾದ ಹಿನ್ನಲೆ ಗಂಡ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದಲ್ಲಿ ನಡೆದಿದೆ.
ನೇಣಿಗೆ ಶರಣಾದ ವ್ಯಕ್ತಿಯನ್ನು ಹರೀಶ್ (32) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಹರೀಶ್ ಡೆತ್‍ನೋಟ್ ಬರೆದಿಟ್ಟಿದ್ದಾನೆ. ಡೆತ್‍ನೋಟ್‍ನಲ್ಲಿ ತನ್ನ ಹೆಂಡತಿ ಬೇರೊಬ್ಬನ ಜೊತೆ ಪರಾರಿಯಾಗಿರುವುದನ್ನು ಉಲ್ಲೇಖಿಸಿದ್ದಾನೆ. ಅಲ್ಲದೇ ತನ್ನ ಸಾವಿಗೆ ಹೆಂಡತಿ, ಅತ್ತೆ, ಮಾವ ಹಾಗೂ ಹೆಂಡತಿಯನ್ನು ಕರೆದುಕೊಂಡು ಹೋದ ಯುವಕನೇ ಕಾರಣ ಎಂದು ಆರೋಪಿಸಿದ್ದಾನೆ.
ಪತ್ನಿ ಹರೀಶ್ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಳು. ಅಲ್ಲದೇ ಪ್ರಾಣ ಬೆದರಿಕೆ ಹಾಕಿದ್ದಳು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ತನ್ನ ಅಂತ್ಯ ಸಂಸ್ಕಾರವನ್ನ ಬಸವ ಧರ್ಮ ಪ್ರಕಾರವಾಗಿ ನೆರವೇರಿಸುವಂತೆ ಡೆತ್‍ನೋಟ್‍ನಲ್ಲಿ ಆತ ಬರೆದಿಟ್ಟಿದ್ದಾನೆ. ಬಳಿಕ ಜಮೀನಿಗೆ ಹೋಗಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




