ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಗೂಂಡಾಗಿರಿ: ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಅರೆಸ್ಟ್
ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಅವರ ಗೌಪ್ಯ ದಾಖಲೆಗಳನ್ನು ಪಡೆದು ಪೌರತ್ವ ಪರಿಶೀಲಿಸುವ ಮೂಲಕ ಅನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸರು ಶುಕ್ರವಾರ (ಜ.16) ತಡರಾತ್ರಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು ಗ್ರಾಮಾಂತರ ಎಸ್ಪಿಯ ಮಾರ್ಗದರ್ಶನದಲ್ಲಿ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧನ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು ಎಂದು ವರದಿಗಳು ಹೇಳಿವೆ.
ಬಂಧನ ವಿಷಯ ತಿಳಿದು ಪುನೀತ್ ಕೆರೆಹಳ್ಳಿಯ ಬೆಂಬಲಿಗರು ಠಾಣೆ ಮುಂದೆ ಜಮಾಯಿಸಿದ್ದರು. ಆದರೆ, ಅವರನ್ನು ನಿಯಂತ್ರಿಸಿದ ಪೊಲೀಸರು, ಆರೋಪಿಯ ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಕೆಲ ದಿನಗಳಿಂದ ಕೊಲೆ ಆರೋಪಿ ಪುನೀತ್ ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಲಸೆ ಕಾರ್ಮಿಕರು, ಬಡ ಕೂಲಿಕಾರರು, ನಿರಾಶ್ರಿತರ ಶೆಡ್‌ಗಳಿಗೆ ತೆರಳಿ ಅವರ ಗೌಪ್ಯ ದಾಖಲೆಗಳನ್ನು ಪಡೆದು ಪೌರತ್ವ ಪರಿಶೀಲಿಸುತ್ತಿದ್ದ. ತನ್ನ ಅನೈತಿಕ ಪೊಲೀಸ್‌ಗಿರಿಯ ವಿಡಿಯೋವನ್ನು ಮಾಡುತ್ತಿದ್ದ.




