ನನ್ನ ಕುತ್ತಿಗೆಯನ್ನು ಕೊಯ್ದರೂ ಹಿಂದುತ್ವವನ್ನು ಮಾತ್ರ ಬಿಡಲ್ಲ: ಬಿಜೆಪಿ ಪಕ್ಷಕ್ಕೆ ವಾಪಸ್ ಆಗುವ ಇಂಗಿತ ವ್ಯಕ್ತಪಡಿಸಿದ ಕೆಎಸ್ ಈಶ್ವರಪ್ಪ
ಶಿವಮೊಗ್ಗ: ನನ್ನ ಕುತ್ತಿಗೆಯನ್ನು ಕೊಯ್ದರೂ ಹಿಂದುತ್ವವನ್ನು ಮಾತ್ರ ಬಿಡುವುದಿಲ್ಲ ಎಂದು ಹೇಳಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಬಿಜೆಪಿ ಪಕ್ಷಕ್ಕೆ ವಾಪಸ್ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯ ಹರಿಹರದ ಪಂಚಮಸಾಲಿ ಪೀಠದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೆಎಸ್ ಈಶ್ವರಪ್ಪ, ‘ಬಿಜೆಪಿಗೆ ಮರಳುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಪಕ್ಷದಲ್ಲಿ ಪರಿವರ್ತನೆ ಆಗಬೇಕು ಎಂದು ನಾನು ಹೊರಗೆ ಬಂದಿದ್ದೇನೆ.
ಆ ಪರಿವರ್ತನೆ ಇವತ್ತಲ್ಲ ನಾಳೆ ಆಗುತ್ತೆ. ಬಿಜೆಪಿ ಕಾರ್ಯಕರ್ತರು ಪಕ್ಷದಲ್ಲಿ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ನನ್ನ ಮನಸ್ಸಲ್ಲೂ, ಯತ್ನಾಳ್ ಮನಸ್ಸಲ್ಲೂ ಇದೆ ವಿಚಾರ ಇದೆ ಎಂದಿದ್ದಾರೆ.
ಇದೇ ವೇಳೆ ಹಿಂದುತ್ವದ ಕುರಿತು ಮಾತನಾಡಿದ ಈಶ್ವರಪ್ಪ, ‘ನಮ್ಮ ಕುತ್ತಿಗೆ ಕೊಯ್ದರೂ ಹಿಂದುತ್ವ ಬಿಟ್ಟು ಬೇರೆ ಕಡೆ ಹೋಗಲ್ಲ. ಇವತ್ತಲ್ಲ ನಾಳೆ ಪಕ್ಷಕ್ಕೆ ಒಳ್ಳೆಯ ಸ್ಥಿತಿ ಬರುತ್ತೆ. ಬಿಜೆಪಿ ಪಾದಯಾತ್ರೆ ವಿಚಾರಕ್ಕೂ ನನಗೇನೂ ಸಂಬಂಧ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.




