December 21, 2025

ಕೋಟೇಶ್ವರ: ಒಣ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ಆಸ್ತಿಪಾಸ್ತಿ ಹಾನಿ

0
image_editor_output_image-1582651033-1766309108598.jpg

ಕುಂದಾಪುರ: ಕೋಟೇಶ್ವರ ಗ್ರಾಮ ಪಂಚಾಯತ್‌ಗೆ ಸೇರಿದ ಎಸ್‌ಎಲ್‌ಆರ್‌ಎಂ ಒಣ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಗೊಳಗಾದ ಘಟನೆ ಭಾನುವಾರ ಮುಂಜಾನೆ ಸಂಭವಿಸಿದೆ.

ಕೋಟೇಶ್ವರ ಗ್ರಾಮ ಪಂಚಾಯತ್ ಕಚೇರಿಯ ಹಿಂಭಾಗದಲ್ಲಿರುವ (ಹಳೆ ಪಂಚಾಯತ್ ಕಟ್ಟಡ) ಈ ಎಸ್‌ಎಲ್‌ಆರ್‌ಎಂ ಘಟಕವು ಕಳೆದ ನಾಲ್ಕೈದು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಈ ಕಟ್ಟಡದ ಕೆಳಭಾಗದಲ್ಲಿ ವಾಣಿಜ್ಯ ಸಂಕೀರ್ಣಗಳಿದ್ದು, ಮೇಲ್ಭಾಗದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕವಿತ್ತು. ಘಟಕದಲ್ಲಿ ಸಂಗ್ರಹಿಸಿಟ್ಟಿದ್ದ ಒಣ ತ್ಯಾಜ್ಯಕ್ಕೆ ಬೆಂಕಿ ಬಿದ್ದ ಪರಿಣಾಮವಾಗಿ, ಅಲ್ಲಿನ ಯಂತ್ರೋಪಕರಣಗಳು, ಶೇಖರಿಸಿದ್ದ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಸಾಮಗ್ರಿಗಳು ಮತ್ತು ಕಟ್ಟಡದ ಮೇಲ್ಛಾವಣಿಯ ಶೀಟುಗಳು ಸಂಪೂರ್ಣ ಸುಟ್ಟು ಹೋಗಿವೆ.

ಬೆಂಕಿಯ ತೀವ್ರತೆಗೆ ಪಕ್ಕದ ವಾಣಿಜ್ಯ ಸಂಕೀರ್ಣದಲ್ಲಿದ್ದ ತರಕಾರಿ ಅಂಗಡಿ ಸೇರಿದಂತೆ ಕೆಲವು ಮಳಿಗೆಗಳ ಸಾಮಗ್ರಿಗಳಿಗೂ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ.

ಮುಂಜಾನೆ ಸಂಚರಿಸುತ್ತಿದ್ದ ಅಯ್ಯಪ್ಪ ಭಕ್ತರು ಬೆಂಕಿ ಉರಿಯುತ್ತಿರುವುದನ್ನು ಗಮನಿಸಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಮತ್ತು ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳಿಗೆ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ.

Leave a Reply

Your email address will not be published. Required fields are marked *

error: Content is protected !!