ಮೆಸ್ಸಿ ಯೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಯುವ ಆಟಗಾರರಿಗೆ ಜಾಗ ಬಿಟ್ಟ ರಾಹುಲ್ ಗಾಂಧಿ ನೆಡೆಗೆ ಭಾರೀ ಮೆಚ್ಚುಗೆ
ಹೈದರಾಬಾದ್: ಅರ್ಜೆಂಟೀನಾದ ಫುಟ್‌ಬಾಲ್ ದಂತಕಥೆ ಲಿಯೊನೆಲ್ ಮೆಸ್ಸಿಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೋರಿದ ಸಂವೇದನಾಶೀಲ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಆರಂಭಿಸಿರುವ ‘GOAT Tour of India’ ಸಂಜೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವು ಸಾಂಗವಾಗಿ ನೆರವೇರಿತು. ಹೈದರಾಬಾದ್‌ಗೆ ಬಂದ ಮೆಸ್ಸಿ ಅವರನ್ನು ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಆದರದಿಂದ ಸ್ವಾಗತಿಸಿದರು. ನಂತರ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವತಃ ಫುಟ್‌ಬಾಲ್ ಆಟಗಾರನಂತೆ ಪೋಷಾಕು ಧರಿಸಿ ಗಮನ ಸೆಳೆದರು. ಅವರಿಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಥ್ ನೀಡಿದರು.
ಮೆಸ್ಸಿ, ರೊಡ್ರಿಗೊ ಡಿ ಪೌಲ್, ಲೂಯಿಸ್ ಸೂರೆಜ್ ಅವರು ಕೆಲಹೊತ್ತು ಫುಟ್‌ಬಾಲ್ ಆಡುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಫುಟ್‌ಬಾಲ್ ತಂಡಕ್ಕೆ ಮೆಸ್ಸಿ ಟ್ರೋಫಿ ನೀಡಿದರು. ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಯುವ ಆಟಗಾರರು ಬಂದ ವೇಳೆ ಮೆಸ್ಸಿ ಅವರೊಂದಿಗೆ ನಿಂತಿದ್ದ ರಾಹುಲ್ ಗಾಂಧಿ ಹಿಂದೆ ಸರಿದು ಆಟಗಾರರಿಗೆ ಜಾಗ ಮಾಡಿಕೊಟ್ಟರು.
ಈ ಸಂದರ್ಭದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ರಾಹುಲ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





