ನ್ಯಾಯಮೂರ್ತಿ ಗವಾಯಿವರ ಮೇಲೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿಶೋರ್ ಗೆ ಅಪರಿಚಿತ ವ್ಯಕ್ತಿಯಿಂದ ಚಪ್ಪಲಿಯೇಟು: ವೀಡಿಯೊ ವೈರಲ್
ನವದೆಹಲಿ: ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು CJI ಆಗಿದ್ದಾಗ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯ ವೇಳೆ ಅವರ ಮೇಲೆ ಶೂ ಎಸೆದು ಸುದ್ದಿಯಾಗಿದ್ದ ವಿವಾದಿತ ವಕೀಲ ರಾಕೇಶ್ ಕಿಶೋರ್ ಗೆ ಮಂಗಳವಾರ ಚಪ್ಪಲಿಯೇಟು ಕೊಟ್ಟಿರುವ ಘಟನೆ ನಡೆದಿದೆ.
ದಿಲ್ಲಿಯ ಕರ್ಕಾರ್ಡೂಮಾ ನ್ಯಾಯಾಲಯ ಸಂಕೀರ್ಣದಲ್ಲಿ ಆತನ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಹಲ್ಲೆ ನಡೆಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, ವ್ಯಕ್ತಿಯೊಬ್ಬ ಕಿಶೋರ್ ಗೆ ಚಪ್ಪಲಿಯನ್ನು ಎತ್ತಿ ಹೊಡೆಯಲು ಮುಂದಾಗುತ್ತಿದ್ದಂತೆ ಅಲ್ಲಿದ್ದ ಜನರು ತಕ್ಷಣ ಮಧ್ಯಪ್ರವೇಶಿಸಿ ದಾಳಿಯನ್ನು ತಡೆಹಿಡಿಯುವ ಪ್ರಯತ್ನ ಮಾಡುತ್ತಿರುವುದು ಕಾಣಿಸುತ್ತದೆ. ದಾಳಿ ನಡೆಸಿದ ವ್ಯಕ್ತಿಯ ಮುಖ ಸ್ಪಷ್ಟವಾಗಿಲ್ಲದ ಕಾರಣ, ಅಪರಿಚ ವ್ಯಕ್ತಿಯ ಗುರುತು ಇನ್ನೂ ನಿಖರವಾಗಿಲ್ಲ.
ಅಕ್ಟೋಬರ್ 6ರಂದು ಸುಪ್ರೀಂ ಕೋರ್ಟ್ನಲ್ಲಿ CJI ಗವಾಯಿಯವರಿದ್ದ ಪೀಠದಲ್ಲಿ ನಡೆಯುತ್ತಿದ್ದ ವಿಚಾರಣೆಯಲ್ಲಿ ವಕೀಲ ರಾಕೇಶ್ ಕಿಶೋರ್, ಗವಾಯಿ ಅವರತ್ತ ಶೂ ಎಸೆದಿದ್ದ ಘಟನೆ ನಡೆದಿತ್ತು. ಸನಾತನ ಧರ್ಮ ರಕ್ಷಣೆಯ ಹೆಸರಿನಲ್ಲಿ ಘೋಷಣೆಗಳನ್ನು ಕೂಗಿದ್ದ ರಾಕೇಶ್, ಖಜುರಾಹೊದ ವಿಷ್ಣುವಿನ ಶಿರಚ್ಛೇದಿತ ವಿಗ್ರಹ ಪುನಃಸ್ಥಾಪನೆ ವಿಚಾರಣೆಯ ವೇಳೆ CJI ಗವಾಯಿ ನೀಡಿದ ಹೇಳಿಕೆಗಳನ್ನು ಟೀಕಿಸಿದ್ದ. ಬುಲ್ಡೋಝರ್ ಧ್ವಂಸಗಳ ಕುರಿತ ಗವಾಯಿ ಅವರ ಅಭಿಪ್ರಾಯಕ್ಕೂ ಆತ ವಿರೋಧ ವ್ಯಕ್ತಪಡಿಸಿದ್ದ.





