ಕೇಪು ಕಜಂಬು ಜಾತ್ರೆ: ಆಜ್ಞಾ ದಿನದಿಂದ ನೇಮೋತ್ಸವದ ವರೆಗೆ: ಬರಹ:ರಾಧಾಕೃಷ್ಣ ಎರುಂಬು ರಾಮ್ದೇವ್” ವಿಟ್ಲ
ನಮ್ಮೂರು ನಮಗೆ ಹೆಮ್ಮೆ. ಇಷ್ಟಿಕಾಪುರ, ವಿಟ್ಲ, ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಂಪದ್ಭರಿತವಾದ 16 ಗ್ರಾಮಗಳ ಸೀಮೆ ಎಂಬುದು ಇತಿಹಾಸ ಪುರಾವೆಗಳುಳ್ಳ ರಾಜಾಡಳಿತವಿದ್ದ ಗ್ರಾಮೀಣ ಪ್ರದೇಶ. ವಿಟ್ಲ ಡೊಂಬ ಹೆಗಡೆ ಮನೆತನ ವಿಟ್ಲ ಅರಮನೆಯ ಅರಸರು ಎಂಬುದೂ ಇತಿಹಾಸ ಪುಟ ಸೇರಿದ ಸತ್ಯ. 800 ವರ್ಷದ ಹಿಂದಿನ ಇತಿಹಾಸವಿದೆ ಎಂಬುದು ಮಾದ್ಯಮಗಳಲ್ಲಿ ಇದ್ದರೂ 1800ರ ಆಸು ಪಾಸಿನಲ್ಲಿ ಬ್ರಿಟಿಷರ ಆಳ್ವಿಕೆಗೆ ಎದೆಗುಂದದ ವಿಟ್ಲದ ಅರಸೊತ್ತಿಗೆಯ ಕಾಲಕ್ಕೇ ನೈಜತೆಯಿತ್ತೆನ್ನುವುದಕ್ಕೆ ಮಾದ್ಯಮ ಮತ್ತು ಅಂದಿನ ಬರಹಗಳು ಉಲ್ಲೇಖ ನೀಡುತ್ತವೆ. ಪಾಂಡವರ ಕಾಲಕ್ಕೆ ವಿಟ್ಲ ಪಂಚಲಿಂಗೇಶ್ವರ ದೇವಾಲಯ, ಯಥಾ ಸಂಬಂದಿತ ಕೇಪು ಶ್ರೀ ಉಳ್ಳಾಲ್ತಿ ದೇವಾಲಯವು ಸ್ಥಾಪಿತವಾಗಿರಬಹುದೆಂದು ನಂಬಿಕೊಳ್ಳೋಣ.
ತುಳುನಾಡು,ಇಲ್ಲಿನ ಅರಸರ – ಪ್ರಜೆಗಳ ಆರೋಗ್ಯಕರ ಸಂಬಂಧ ಎಷ್ಟು ಶುದ್ಧ ಎನ್ನುವುದಕ್ಕೆ ಕೇಪು ಕಜಂಬು ಜಾತ್ರೆಯೇ ಒಂದು ಜ್ವಲಂತ ಸಾಕ್ಷಿ. ಕದಂಬರು, ಮೌರ್ಯರು, ಹೊಯ್ಸಳರಂತೆ, ಅರಸೊತ್ತಿಗೆ ಪ್ರಾಂತೀಯ ಆಡಳಿತದೊಂದಿಗೆ ನಡೆಯುತಿತ್ತು ಎನ್ನುವುದಕ್ಕೆ ವಿಟ್ಲ ಅರಮನೆಯ 16 ಗ್ರಾಮದ ಜನರ ಜೊತೆ ಇರಿಸಿದ್ದ ಸಂಬಂಧಗಳೇ ಸಾಕ್ಷಿ. ಕೃಷಿ ಅವಲಂಬಿತ 16 ಗ್ರಾಮಗಳ ಜನರ ಶ್ರದ್ಧೆ ಅರಸರ ಆಳ್ವಿಕೆ, ಅವರ ಮೇಲೆ ಇಟ್ಟಿರುವ ನಂಬಿಕೆ ಬಗ್ಗೆ ಇದು ಒಂದು ಇಣುಕು ನೋಟ ಅಷ್ಟೇ.
ವಿಟ್ಲ ಸೀಮೆಯಲ್ಲಿ ಕೇಪು ಶ್ರೀ ಉಳ್ಳಾಲ್ತಿ ಅಮ್ಮ ಹದಿನಾರು ಗ್ರಾಮಗಳನ್ನು ಕಾಯುವ ನಮ್ಮ ಮಾತೆ ಎಂಬ ಮಮತೆ , ಭಕ್ತಿ, ನಂಬಿಕೆ. ಅವಳ ನಡೆಯಲ್ಲಿ ನಡೆಯುವ ಉತ್ಸವ ದ ಬಗ್ಗೆ ಒಂದಷ್ಟು ಚಿಂತನೆ ಅಷ್ಟೆ.ಇದು ಕರಾರು ಅಲ್ಲ.
**ಕೇಪು ಆಗಿನ:-* ವೃಶ್ಚಿಕ ಮಾಸ 20ನೇ ದಿನ(ಈ ವರ್ಷ 6.12.2025) ಕೇಪು ಜಾತ್ರೆಯ ಆಜ್ಞಾ ಕಾರ್ಯಕ್ರಮ ಅಥವಾ ತುಳುವಿನಲ್ಲಿ ‘ಆಗಿನ ‘ಎನ್ನುವುದು ಆರಂಭವಾಗುತ್ತದೆ. ಆ ದಿನ ಬೆಳಗ್ಗೆ ಎಂದಿನಂತೆ ಉಳ್ಳಾಲ್ತಿ ದೇವಸ್ಥಾನದ ಪ್ರಧಾನ ಅರ್ಚಕರು ಮತ್ತು ದೇವಸ್ಥಾನದ ಪರಿಚಾರಿಕೆ ಯುಳ್ಳ ಪ್ರದಾನ ಅರ್ಚಕರು, ಗುರಿಕಾರರು ಊರ ಭಕ್ತ ಸಮುಚ್ಚಯ ಸೇರಿಕೊಂಡು ದೇವಸ್ಥಾನದ ಎದುರು ಭಾಗದಲ್ಲಿ ಸಿಯಾಳ ಕಾಣಿಕೆಯನ್ನು ಇತ್ತು ಮಾತೆಯಲ್ಲಿ ಆಜ್ಞೆಯನ್ನು ಕೇಳುತ್ತಾರೆ. ಇದನ್ನೇ “ಸ್ವಾಮಿ ಪಾದ ಕಾಣಿಕೆ” ಎಂದು ಕರೆಯುತ್ತಾರೆ. ವಿಶೇಷ ಕಾಣಿಕೆಯನ್ನು ಪ್ರತ್ಯೇಕ ಪ್ರತ್ಯೇಕವಾಗಿ ವಿಟ್ಲ ಅರಸರ ಪ್ರತಿನಿಧಿಗಳು,ಕೇಪು,ಕುಂಡಕೋಳಿ , ಕಲ್ಲಂಗಳ , ಬೆಂಗ್ರೋಡಿ ಮನೆತನಗಳ ಗುರಿಕಾರರು , ಬೇತ- ಪದ್ಯಾಣ, ನೂಜಿ – ನೆಡ್ಲೆ ಗುರಿಕಾರರು, ಮಲರಾಯ ದೈವ ಮತ್ತು ಪಿಲಿಚಾಮುಂಡಿ ದೈವದ ಮಾಣಿ, ಮಡಿವಾಳರು ಮತ್ತು ಇದರ ಪರಿಚಾರಿಕೆಯವರು ಸೇರಿ ಪ್ರಧಾನ ಅರ್ಚಕರ ಮೂಲಕವಾಗಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ವರ್ಷo ಪ್ರತಿ ನಡೆಯುವ ಉಳ್ಳಾಲ್ತಿ ಅಮ್ಮನ ಕಜಂಬು ಜಾತ್ರೆಯನ್ನು ನಿರ್ವಿಘ್ನವಾಗಿ ನಡೆಸಿಕೊಡಬೇಕು ಎಂಬುದಾಗಿ ಅಧಮ್ಯ ಭಕ್ತಿಯಿಂದ ಪ್ರಾರ್ಥಿಸಿದ ಬಳಿಕ ದೇವಿಯ ಮಹಾಪೂಜೆ ನಡೆದು ಪ್ರಸಾದ ವಿತರಣೆಯು ನಡೆಯುತ್ತದೆ ಇದನ್ನೇ “ಆಜ್ಞಾ ದಿನ” ಎಂದು ಉಲ್ಲೇಖಿಸುತ್ತಾರೆ ಇದರ ಬಳಿಕ ಜಾತ್ರೆಯ ದ್ವಜಾ ಅವರೋಹಣದ ವರೆಗೂ ಎರಡೂರಿನಲ್ಲಿ(ಕೇಪು ಮತ್ತು ಅಳಿಕೆ) ಯಾವುದೇ ರೀತಿಯ ಅಹಿತಕರ ಘಟನೆಗಳು ರಕ್ತ ಬಿಂದುವಿನಂತಹ ಕಾರ್ಯಗಳು, ಮದುವೆ ಇನ್ನಿತರ ಕಾರ್ಯ ನಡೆಯಬಾರದು ಎನ್ನುವುದು ವಾಡಿಕೆ . ಪೂಜಾದಿ ದೈವೀ ಕಾರ್ಯಗಳಿಗೆ ನಿರ್ಭಂಧವಿಲ್ಲ. ಹಿಂದೆ 16 ಗ್ರಾಮಗಳ ಸರ್ವಭಕ್ತರು ಯಾವುದೇ ಮಾಂಸಾಹಾರವನ್ನು ಈ ಸಂದರ್ಭದಲ್ಲಿ ಸೇವಿಸುತ್ತಿರಲಿಲ್ಲ ಎನ್ನುವುದು ಇದೆ. ಅದೇ ದಿನ ಸಂಜೆ ದೇವಸ್ಥಾನದ ಪ್ರಧಾನ ಅರ್ಚಕರು ದೇವರ ಪ್ರಸಾದವನ್ನು ಎಲ್ಲಾ ಗುರಿಕಾರರ, ಪರಿಚಾರಿಕೆ ಯವರ ಜೊತೆ ವಿಟ್ಲ ಅರಮನೆಗೆ ತೆರಳಿ ಅರಸರಿಗೆ ಕಾಣಿಕೆಯಿತ್ತು , ಪ್ರಧಾನ ಅರ್ಚಕರು ಪ್ರಸಾದವನ್ನು ಅರಸರ ಕೈಲಿತ್ತು ಶ್ರೀದೇವಿಯ ಕಜಂಬು ಜಾತ್ರೆಯ ಶುಭಕಾರ್ಯವನ್ನು ನಿರ್ವಘ್ನವಾಗಿ ನಡೆಸಿಕೊಡಬೇಕು ಎಂಬುದಾಗಿ ಪ್ರಾರ್ಥಿಸುತ್ತಾರೆ. ಮುಖ್ಯವಾಗಿ ಎರಡೂರ ಅದರಲ್ಲೂ ಕೇಪು , ಅಳಿಕೆ, ಕುಂಡ ಕೋಳಿ ಮನೆತನದ ಗುರಿಕಾರರು ಅರಸರಲ್ಲಿ ಕಾರ್ಯಕ್ರಮವನ್ನು ನಿಮ್ಮ ಉಪಸ್ಥಿತಿಯಲ್ಲಿ ನಡೆಸಿಕೊಡಬೇಕು ಎಂದು ಪ್ರಾರ್ಥಿಸುತ್ತಾರೆ. ಪ್ರಾರ್ಥನೆಯನ್ನು ಸ್ವೀಕರಿಸಿದ ಅರಸರು “ನನ್ನ ಉಪಸ್ಥಿತಿಯಲ್ಲಿ ಜಾತ್ರೆಯು ನಿಮ್ಮೆಲ್ಲರ ಸಹಕಾರದಿಂದ ನಡೆಯಲಿದೆ” ಎಂಬುದಾಗಿ ಎಲೆ ಮತ್ತು ಅಡಿಕೆಯ ಮೂಲಕವಾಗಿ ಪಟ್ಟಿಯನ್ನು ನೀಡುತ್ತಾರೆ .
*ಓಲೆಗರಿಯ ಓಲೆ:-* ಹಾಗೆಯೇ 16 ಗ್ರಾಮಗಳ ಪ್ರತಿನಿಧಿಗಳಿಗೆ ಓಲೆಗರಿಯಲ್ಲಿ ಆಮಂತ್ರಣವನ್ನು ಕಳಿಸುತ್ತಾರೆ . ಅಂದಿನ ಕಾಲಕ್ಕೆ ಓಲೆಕಾರರಾಗಿರುವ ವಾದ್ಯದವರು ಮತ್ತು ಪರಿಚಾರಿಕೆ ಅವರು ಸೇರಿಕೊಂಡು 16 ಓಲೆಗಳನ್ನು 16 ಗ್ರಾಮಕ್ಕೆ ತಲುಪಿಸುತ್ತಾರೆ. ಒಂದು ಗ್ರಾಮದ ನಿರ್ದಿಷ್ಟವಾದಂತಹ ಗುರಿಕಾರ ಸ್ಥಾನದಲ್ಲಿರುವ ಮನೆಗಳು ಜಾತಿ ಮತ ಭೇದವಿಲ್ಲದೆ ಅಂದಿನ ಕಾಲಕ್ಕೆ ಅರಸರು ನಿಯೋಜಿಸಿರುವ ಪರಿಚಾರಿಕೆಯವರ ಗುತ್ತುಬಾರಿಕೆದಾರರ, ಬ್ರಾಹ್ಮಣ ಗುರಿಕಾರರ ಮನೆಗಳಿಗೆ ಓಲೆಗರಿಯ ಆಮಂತ್ರಣ ತಲುಪುತ್ತದೆ ಒಂದೇ ಓಲೆಯು ಒಂದು ಗ್ರಾಮದಲ್ಲಿ ಓದಿಸುತ್ತಾ..ಓದಿಸುತ್ತಾ ಆ ಓಲೆಯು ಮುಖ್ಯ ಗುರಿಕಾರರ ಮನೆಯಲ್ಲಿ ಬಂದು ಸೇರುತ್ತದೆ ಹೀಗೆ ಹದಿನಾರು ಗ್ರಾಮಗಳಲ್ಲಿ 16 ಓಲೆಗರಿಗಳ ಬರಹಗಳ ಮೂಲಕ ಜಾತ್ರೆಗೆ 16 ಗ್ರಾಮಗಳ ಭಕ್ತರನ್ನು ಒಲೈಸಲಾಗುತ್ತದೆ. ಇಂದೂ ಹಾಗೆ ನಡೆಯುತ್ತಿರುವುದು ನಿಜವಾಗಲೂ ಆಶ್ಚರ್ಯ ಮತ್ತು ನಂಬಿಕೆಗೆ ಕೊಟ್ಟ ಗೌರವವೂ ಹೌದಾಗಿದೆ.
ವಿಟ್ಲ ಸೀಮೆಗೆ ಸೇರಿದ 16 ಗ್ರಾಮಗಳು ಕೇಪು ಗ್ರಾಮ ಮತ್ತು ಅಳಿಕೆ ಗ್ರಾಮಗಳ (ಎರಡೂರು) ವಿಟ್ಲ, ಒಕ್ಕೆತ್ತೂರು ಪುಣಚ, ವಿಟ್ಲ ಪಡ್ನೂರು , ಸಾಲೆತ್ತೂರು ,ಪುಣಚ, ಮಾಣಿಲ ,ಪೆರುವಾಯಿ, ಚಿಪ್ಪಾರು, ಬಾಯಾರು, ಕುಡಾಲು , ಮೇರ್ಕಳ, ಕನ್ಯಾನ, ಕರೋಪಾಡಿ , ಮುಂತಾದವುಗಳಾಗಿವೆ.
ವೃಶ್ಚಿಕ ಮಾಸದ 26ನೆಯ ದಿನ ದೇವಸ್ಥಾನದ ಜಾತ್ರೆಯ ಸಲುವಾಗಿ ಸಿದ್ಧತೆಗಳು ಆರಂಭವಾಗುತ್ತದೆ. ಒಂದು ಕುಂದು ನಲ್ಪೊಳು (ನಲುವತ್ತಕ್ಕೆ ಒಂದು ಕಡಿಮೆ) ಈಗ “*ನಾಲ್ಪೊಳು*” ಎಂದು ಕರೆಯಲ್ಪಡುವ ಅರಸರಿಂದ ನಿಯೋಜಿಸಲ್ಪಟ್ಟ ನಾಲ್ವರು ಸೀಮೆಯ ಪ್ರತಿನಿಧಿಗಳು ಈ ಉತ್ಸವದ ವಂತಿಗೆಕಾರರಾಗಿ 16 ಗ್ರಾಮಗಳಲ್ಲಿ ಒಂದು ಬಿಳಿ ಮುಂಡಾಸು, ಬಿಳಿ ಪಂಚೆಯ ಕಚ್ಚೆ, ಬರಿ ಕಾಲ್ನಡಿಗೆಯಲ್ಲಿ ಅದಕ್ಕಾಗಿಯೇ ಮೀಸಲಿಟ್ಟ ಸ್ಥಳಗಳಲ್ಲಿ( ಇಂದು ಬೇರೆ ಬೇರೆ ಗ್ರಾಮಗಳಲ್ಲಿ ಮಂಟಮೆ – ಆಹಾರ ನೀಡುವ ಮನೆತನಗಳು ಹಾಗೆ ಪಾಲಿಸಿಕೊಂಡು ಬರುತ್ತಿರುವುದು ನಿಜವಾಗಲೂ ಉಲ್ಲೇಖನೀಯ) ಹಸಿ ಮಡಲಿನಲ್ಲಿ ರಾತ್ರಿ ಕಳೆದು ಬೆಳೆ ಕಾಣಿಕೆ, ಕೋಳಿ, ಹಿಂಗಾರ, ಹಾಳೆ ಮೊದಲಾದ ವಸ್ತುಗಳ ಸಂಗ್ರಹಕ್ಕೆ ವೃಶ್ಚಿಕ ಮಾಸದ 26 ರಂದು ಅರಸರಿಂದ (ಆಣತಿ) ಪಟ್ಟಿ ಪಡೆದು , ಮುಂಡಾಸು ಕಟ್ಟಿಸಿಕೊಂಡು ಹೊರಡುತ್ತಾರೆ.
ಈ ನಲ್ಪೊಳುಗಳು ಮುಂದೆ ತಿಳಿಸಿರುವ ನಿಧಿ ಹುಡುಕಿದ ಮಾಯವಾಗಿರುವ ನಲುವತ್ತು ಆಳುಗಳ ಪ್ರತಿನಿಧಿಗಳು ಎಂಬುದಾಗಿಯು ಅರಿತವರ ನುಡಿಯಾಗಿದೆ.
ಮಾತು ಕಡಿಮೆ, ಅಶೌಚ ದವರು ಇವರೆದುರು ಬರುವಂತಿಲ್ಲ, ನಿಗದಿತ ಸಮಯ, ಮೀಸಲಿಟ್ಟ ದಾರಿ, ಹೀಗೆ ಅರಸರ ಆಜ್ಞಾನುಸಾರ ನಡೆದು ಬಂದ ಕಟ್ಟಲೆ ಇಂದೂ ನಡೆಯುತ್ತಿದೆ. ಗ್ರಾಮದ ಒಂಜಿ ಕುಂದು ನಲ್ಪೋಲು ಎನ್ನುವ ಇವರು ಇಂದು ಒಂದು ರೀತಿಯಲ್ಲಿ ದೇವಿಯ ಸೇವಕರೆಂಬ ಭಕ್ತಿ ಗ್ರಾಮದ ಜನರಲ್ಲಿದೆ. ಹೊತ್ತು ನಡೆಯುವ ಭಾರ ಕಡಿಮೆ ಗೊಳಿಸಲು ಅಲ್ಲಲ್ಲಿ ನಿಗದಿತ ಮನೆಗಳಲ್ಲಿರಿಸಿ ಮತ್ತೆ ಒಯ್ಯುವ ಸಂಪ್ರದಾಯ ಈಗಲೂ ನಡೆಯುತ್ತಿದೆ. ಈ ನಾಲ್ಪೊಳುಗಳು ವೃಶ್ಚಿಕ ಮಾಸದ 27 ರಂದು ಕೇಪು ದೇವಸ್ಥಾನದ ಬಳಿಯ ನಿಗದಿತ ಮನೆಯಲ್ಲಿ ಸ್ತಾನಾದಿ ಪೂರೈಸಿ ದೇವಳದ ಅಂಗಣದ ಶುಚಿತ್ವ ಕಾರ್ಯಕ್ಕೆ ಚಾಲನೆ ಕೊಡುತ್ತಾರೆ.ಇದೇ *ಅಂಗಣಕ್ಕೆ ಕೊಟ್ಟು* ಹಾಕುವುದು. ಬಳಿಕ 3 ದಿನಗಳಲ್ಲಿ ಉತ್ಸವಕ್ಕೆ ದ್ವಜಾರೋಹಣವಿರುವುದರಿಂದ ಹಿಂದಿನ ಕಾಲಕ್ಕೆ ಇದು ಇಷ್ಟು ಕ್ಷಿಪ್ರವಾಗಿ ನಡೆಯುವುದು ಶ್ರೇಷ್ಠವೇ. ಪ್ರಸ್ತುತ ಕಾಂಕ್ರೀಟ್ ಕಂಬ ,ತಗಡು ಶೀಟು, ನೆಲಕ್ಕೆ ಸಿಮೆಂಟು ಕಾಂಕ್ರೀಟ್ ಇದೆ .ಆದ್ದರಿಂದ ಗಡಿಬಿಡಿ ಇಲ್ಲ. ಬಳಿಕ ಅದೇ ದಿನ ಸಂಜೆ ಹೊರಡುವ ನಲ್ಪೋಲುಗಳು ಮತ್ತೆ ವಂತಿಗೆಯ ಸಂಗ್ರಹಕ್ಕೆ ತೊಡಗುತ್ತಾರೆ. ಸಂಕ್ರಮಣದ ದಿನ ಅಂದರೆ ವೃಶ್ಚಿಕ ಮಾಸದ 30 ರ ದಿನ *ದ್ವಜರೋಹಣ* ಕಾರ್ಯಕ್ರಮದಂದು ಮತ್ತೆ ಹಾಜರಾಗುತ್ತಾರೆ. ಪ್ರತಿ ಸಂಕ್ರಮಣದಂದು ಬರುವಂತೆ ಮಲರಾಯ ಮತ್ತು ಪಿಲಿಚಾಮುಂಡಿ ದೈವಗಳ ಭಂಡಾರ ಕ್ಷೇತ್ರಕ್ಕೆ ಬರುವುದು. ನಾಲ್ಪೋಳುಗಳು,ಅರಮನೆಯ ಪ್ರತಿನಿಧಿಗಳು, ಎರಡೂರಗ್ರಾಮ ಗುರಿಕಾರರು , ಊರ ಸಮಸ್ತ ಭಕ್ತಾದಿಗಳು ಪ್ರಾರ್ಥನೆ , ಪೂಜೆ ಸಲ್ಲಿಸಿ, ಬಲಿಕಲ್ಲುಗಳಿಗೆ ತಂತ್ರಿಗಳಿಂದ ಬಲಿಪೂಜೆ ನಡೆದು (ನೆರೊಳು ಸೊಪ್ಪಿನ ಮತ್ತು ಅಕ್ಕಿ) ದೈವಗಳ ಅನು(ಅನುಗ್ರಹ) ಮಾಣಿಚ್ಚಿಲ ಮೂಲಕ ಎರಡೂರ ಗುರಿಕಾರರು , ಕುಂಡಕೊಳಿ ಮನೆತನದವರ ಪ್ರಾರ್ಥನೆಯೊಂದಿಗೆ ಭಕ್ತಾದಿಗಳು ಪಡೆದು , ದ್ವಜಾರೋಹಣ ನಡೆಯುತ್ತದೆ. ದ್ವಜಸ್ತಂಬ ಊರ ಭಕ್ತರ ಬೆಳೆಕಾಣಿಕೆಯಿಂದ ಸಿಂಗರಿಸಲ್ಪಡುತ್ತದೆ. ದ್ವಜ ಅರಮನೆಯಿಂದ ಅದೇ ದಿನ ಬೆಳಗ್ಗೆ ತರಲ್ಪಡುತ್ತದೆ. ಊರಿನ ಭಕ್ತರು ಕೊಡಿಯೇರುವ ದಿನ ಊರಲ್ಲಿ ಇದ್ದರೆ ಕೊಡಿ ಇಳಿಸುವ ದಿನದ ವರೆಗೂ ಊರಲ್ಲೇ ಇರಬೇಕೆಂಬ ಪ್ರತೀತಿ ಇದೆ. ಹೆಚ್ಚಾಗಿ ಪಾಲಿಸುತ್ತಾರೆ. ಇಲ್ಲಿಂದ ಜಾತ್ರೆ ಸಂಭ್ರಮ ಆರಂಭ. ಆದರೆ ಇತರ ಜಾತ್ರೆಗಳಿಂದ ಬಿನ್ನ. ದೇವಾಲಯದ ಗದ್ದೆಯಲ್ಲಿ ಸಂತೆಯಿಲ್ಲ, ತಿಂಡಿ ತಿನಿಸುಗಳ ಮಾರಾಟ ಸಲ್ಲ. ಕೇವಲ ಉಳ್ಳಾಲ್ತಿ ಅಮ್ಮನ ಸೇವೆಗಳಷ್ಟೆ. ಮರುದಿನ ಅಂದರೆ ಧನು ಸಂಕ್ರಮಣದ ಮರುದಿನ ಕಜಂಬು ಉತ್ಸವ. ಭಕ್ತಾದಿಗಳ ಮಹಾಪೂರ ಬೆಳಗ್ಗಿನಿಂದಲೇ ಆರಂಭ. ಹರಕೆ ಕಾಣಿಕೆ, ಸೀಯಾಳ ,ಬಲಿವಾಡು, ಮಲ್ಲಿಗೆ ಸಮರ್ಪಣೆ. ದೂರದೂರಿನಲ್ಲಿ ಇರುವ ಊರವರ ಸಮ್ಮಿಲನ.
*ಕಜಂಬು* :- ಇಲ್ಲಿ ಕಜಂಬು ಎಂಬುದಕ್ಕೆ ಕಜೆ ಎಂದರೆ ಕಸ , ಕೂದಲು ಎಂಬರ್ಥ ಎನ್ನುತ್ತಾರೆ ಹಿರಿಯರು. ಕಜಂಬು ಎಂದರೆ ಜನ್ಮದಲ್ಲಿ ಬಂದ ಸರ್ವ ಕಲ್ಮಶಗಳನ್ನು ದೂರಿಕರಿಸಲು ಅಮ್ಮನ ನಡೆಯಲ್ಲಿ ಮಕ್ಕಳ ಸಮರ್ಪಣೆ ಎನ್ನುತ್ತಾರೆ. ಹೆರಿಗೆ, ಮಗುವಿಗೆ ಏನಾದರೂ ಸಮಸ್ಯೆ ಆದಾಗ ಸೀಮೆಯವರು ಮತ್ತು ಈ ಸೀಮೆಯಿಂದ ವಿವಾಹವಾಗಿ ಹೋದವರು ಈ ಹರಕೆ ಮಾಡುತ್ತೇವೆ ಎಂದು ಸಂಕಲ್ಪ ಮಾಡುತ್ತಾರೆ.ಹೆಣ್ಣು ಮಕ್ಕಳಾದರೆ 5 ವರ್ಷದೊಳಗೆ ನಡೆಸಬೇಕು. ಗಂಡುಮಕ್ಕಳಿಗೆ ವಯಸ್ಸಿನ ನಿರ್ಬಂಧವಿಲ್ಲ. ಕಜಂಬುವಿನ ದಿನ ಅಕ್ಕಿ ಪದಾರ್ಥ ಮಗುವಿಗೂ, ಹಾಲು ಕುಡಿಯುವ ಮಗುವಾದರೆ ಅಮ್ಮನೂ ಈ ವೃತ ಪಾಲಿಸಿ ಕ್ಷೇತ್ರಕ್ಕೆ ಬಲಿವಾಡು ಸಲ್ಲಿಸಿ ಕಜಂಬಿನ ನಂತರ ಬಲಿವಾಡು ಪ್ರಸಾದ ದೇವಳದಲ್ಲಿ ಪಡೆಯುವುದು.
ಈ ದಿನ ಸುಮಾರು 7 ರ ಸಮಯಕ್ಕೆ ಅರಮನೆಯಿಂದ ಅರಸರು ಬರುತ್ತಾರೆ. (ಹಿಂದಿನ ಕಾಲಕ್ಕೆ ವಿಟ್ಲದ ಅರಸರು ದೇವಳಕ್ಕೆ ವರ್ಷದಲ್ಲಿ ಎರಡು ಬಾರಿ ಮಾತ್ರ ಪಾದಾರ್ಪಣೆ ಗೈಯುವರೆಂಬ ಪ್ರತೀತಿ). ಅವರನ್ನು ಕುಂಡಕೋಳಿ, ಮತ್ತು ಎರಡೂರ ಮನೆತನದವರು ಸ್ವಾಗತಿಸುತ್ತಾರೆ. ಬ್ಯಾಂಡು, ವಾದ್ಯ ಮೂಲಕ ಕರೆತಂದು ಅರಸರ ಮನೆಯಲ್ಲಿ ಕುಳ್ಳಿರಿಸಿ ಗೌರವ ಸಲ್ಲಿಸುತ್ತಾರೆ. ಬಳಿಕ 3 ಸುತ್ತು ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಪಲ್ಲಕ್ಕಿಯಲ್ಲಿ *ಚೆಲುವಮ್ಮ, ಚೆನ್ನಮ್ಮರ* ಬೆಳ್ಳಿಯ ಮೂರ್ತಿಯನ್ನು ಸಿಂಗರಿಸಿ ಇಡಲಾಗುತ್ತದೆ. ಇವರಾರೆಂದು ಪ್ರಶ್ನೆಯೇ?
ಅದಕ್ಕೊಂದು ಕಥೆಯಿದೆ. ಅರಸರ ಆಳ್ವಿಕೆಯ ಸಮಯ ಈರ್ವರು ಅರಸಬ್ಬೆಯರು ಚೆಲುವಮ್ಮ, ಚೆನ್ನಮ್ಮರು. ದೇವಳದ ಅಮೃತಪಡಿಯಡಿಯಲ್ಲಿ ವಜ್ರ ವೈಢೂರ್ಯದ ನಿದಿಯಿದಿಯೆಂಬ ಮಾಹಿತಿ ಸಿಕ್ಕಿದ ಅರಸಬ್ಬೆಯರು, ತೆಗೆಯುವ ಪ್ರಯತ್ನಕ್ಕೆ ತೊಡಗಿ ಆಳುಗಳನ್ನು ಕಳಿಸಿದರಂತೆ… ನಿದಿಯಗೆಯಲು ಬಂದವರು ತಿರುಗಿ ಬಾರದೆ ಇದ್ದ ಸಮಯಕ್ಕೆ ಅರಸಬ್ಬೆಯರು ಹೊರ ಅಂಗನಕ್ಕಿಲಿದು ನೋಡಿದರೆ ಬಂದ ಆಳುಗಳು ದೇವಳದ ಸುತ್ತ ತಿರುಗುತಿದ್ದರಂತೆ. ಹೊರ ಅಂಗಣ ದಿಂದ ಒಳ ಅಂಗಣ ಇಳಿದ ಚೆಲುವಮ್ಮ, ಚೆನ್ನಮ್ಮರು ಇಳಿದ ಕೂಡಲೆ ಮಾಯವಾದರಂತೆ , ಬಳಿಕ ಅರಸೊತ್ತಿಗೆಯ ಲ್ಲಿ ನಡೆದ ಚಿಂತನೆಯಲ್ಲಿ ವಿಷಯ ತಿಳಿದು ವರ್ಷದ ಜಾತ್ರಾ ಸಮಯದಲ್ಲಿ ದೇವಿಯ ಸಾನಿಧ್ಯದಲ್ಲಿ ದೇವರ ದರ್ಶನ ಪಡೆಯುವ ಇಂಗಿತವಿದೆ ಎನ್ನುವ ಕಾರಣದಿಂದ ಅರಸಬ್ಬೆಯರ ಪ್ರತಿರೂಪದ ಪಲ್ಲಕ್ಕಿಸುತ್ತು ನಡೆಯುತ್ತದೆ. ಬಳಿಕ ಕಜಂಬು ನಡೆಯುತ್ತದೆ.
*ಕಜಂಬು ಸೇವೆ:* ಸರಳವಾದರೂ ಮತ್ತೆಲ್ಲಿಯೂ ಕಾಣದ ಸೇವೆಯಿದು. ಸೇವೆ ಮಾಡಬೇಕಾದ ಮಗು ಯಾ ಸೇವಾರ್ಥಿ ವೃತ ಹಿಡಿದು ಬಲಿವಾಡು ಬರೆಸಿ ಸಂಜೆ ಸುಮಾರು 7ರ ಹೊತ್ತಿಗೆ ಕ್ಷೇತ್ರಕ್ಕೆ ಬರುವುದು. ಕಜಂಬಿಗಾಗಿ ಮೀಸಲಿಟ್ಟಿರುವ ದೇವಾಲಯದ ಹಿಂದೆ ಬಲ ಭಾಗದಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟಿದ ಕೆರೆಯಂತೆ ಕಾಣುವ ಪವಿತ್ರ ನೀರಿನಲ್ಲಿ ಶರೀರ ಪೂರ್ಣ ಒದ್ದೆಯಾಗುವಂತೆ ಮುಳುಗಿಸಿ ದೇವಸ್ಥಾನದ ಅಂಗಣದಲ್ಲಿ ಶಿಸ್ತಿನಿಂದ ನಿಂತು ಪ್ರಾರ್ಥಿಸಿ.. ದೇವಿಯ ದೇವಾಲಯದ ಗರ್ಭಗುಡಿಯ ದ್ವಾರಕ್ಕೆ ತಲೆ ತಾಗಿಸಿದರೆ ಅಮ್ಮನಿಗೆ ಸಮರ್ಪಿಸಿದಂತೆ. ವಯಸ್ಸಾದವರು ಅಡ್ಡಬಿದ್ದರಸ್ಟೆ ಸಾಕು. ಬಳಿಕ ದೇವಾಲಯದ ನಾಲ್ಕು ಮೂಲೆಯಲ್ಲಿರುವ ನಾಲ್ಪೊಳುಗಳಿಗೆ ಯಥಾನುಶಕ್ತಿ ಕಾಣಿಕೆ , ಭಂಡಾರಕ್ಕೆ ಹಿಡಿ ಕಾಣಿಕೆ (ಪುಂಡಿ ಕಾಣಿಕೆ) ಅರ್ಪಿಸಿದರಾಯಿತು. ಒಂದು ಗಳಿಗೆಯ ಮಕ್ಕಳ ಚೀರಾಟವೆ ಅಮ್ಮನಿಗೆ ಸಲ್ಲಿಸುವ ಮಹಾ ಮಂತ್ರ ಮತ್ತು ಅಮ್ಮ ಸಂತುಷ್ಟಲಾಗುತ್ತಾಲೆನ್ನುವ ನಂಬಿಕೆ. ಬಳಿಕ ಅನ್ನಪ್ರಸಾದ ಸ್ವೀಕರಿಸಿ ಮನೆಗೆ ತೆರಳುತ್ತಾರೆ.
*ಕಾಣಿಕೆ ಲೆಕ್ಕ ಮತ್ತು ರಾಜರ ಉಂಗುರ ಮುದ್ರೆ*:- ಕಜಂಬು ನಂತರ ಸೇರಿದ ಕಾಣಿಕೆಯ ಲೆಕ್ಕಾಚಾರ ನಡೆದು ಹರಿಕೆ ಹಣದ ಗಂಟು ಕಟ್ಟಿ ರಾಜ ಮುದ್ರೆಯುಂಗುರದ ಸೀಸದಮುದ್ರೆ ಹಾಕಿ..ಇಡುತ್ತಾರೆ.
*ಶ್ರೀ ಉಳ್ಳಾಲ್ತಿ ಯ ವನದುರ್ಗೆಯ ದೈವಿರೂಪ ದ ಬಲಿಸುತ್ತು*. ಈ ಹೊತ್ತಿಗೆ ಊರವರು, ಪರಿಚಾರಿಕೆಯವರು, 16 ಗ್ರಾಮಗಳ ಗುರಿಕಾರರು ಸಮಸ್ತರ ಉಪಸ್ಥಿತಿಯಲ್ಲಿ ದೇವಿಯ ಪ್ರತಿರೂಪ ಕಟ್ಟಿ ಚಂದನದ ಮೊಗ ಹೊತ್ತ ನೆರಿ ಇಳಿಯುವ ಸೇವೆ. ಇದನ್ನು ಕಡ್ಡಾಯವಾಗಿ ಸ್ತ್ರೀಯರು ನೋಡಬಾರದು. ಬಲಾತ್ಕಾರದಿಂದ ನೊಡಲೆತ್ನಿಸಿ ಕಲ್ಲಾದ ಸ್ಟ್ರಿಯೋರ್ವಳ ಕತೆಯನ್ನು ಹಿರಿಯರು ನೆನಪಿಸುತ್ತಾರೆ. ಮೂರನೇ ಸುತ್ತಿನಲ್ಲಿ ಅಣಿ ತೆಗೆಯಲಾಗುತ್ತದೆ. ಇದೊಂದು ಅಪರೂಪದ ದೇವಿಯ ಸೇವೆಯು ಹೌದು. ಬಳಿಕ ಮಹಾಪೂಜೆ,ಪ್ರಸಾದ ವಿತರಣೆ, ನಡೆದು ಮಲರಾಯ ಸ್ಥಾನಕ್ಕೆ ಭಂಡಾರ ತಂದು ಗಡಿಪತ್ತಿನ ಮಾಣಿಯವರ ಮಲ್ಲಯುದ್ದದ ತರನಾದ ಸೇವೆ ನಡೆದು ಅನುವಾಗುತ್ತದೆ.
ಮುಂದಿನ ಮೂರು ದಿನಗಳಲ್ಲಿ ಮಹಾಪೂಜೆ, ತಂಬಿಲ ಮತ್ತು ಬಲಿ ಪೂಜೆಯಷ್ಟೇ ನಡೆಯುತ್ತದೆ.
*ದ್ವಜ ಅವರೋಹಣ* ಈ ಬಾರಿ 19.12.2025ರಂದು (ಕೊಡಿ ಜಾವುನು) ನಡೆಯುತ್ತದೆ. ಈಗೀಗ ದ್ವಜ ಅವರೋಹಣದ ದಿನ ಬೆಳಗಿನಿಂದಲೇ ಸಿಯಾಳ ಸೇವೆ ನಡೆಯುತ್ತದೆ. ಊರವರೆಲ್ಲ ಆ ದಿನ ಬೆಲೆ ಕಾಣಿಕೆ ಅರ್ಪಿಸಿ ದೇವಳದಲ್ಲಿ ಜಾಗರಣೆ ಕುಳಿತುಕೊಳ್ಳುತ್ತಾರೆ. ಅಂದು ಸಂಜೆ ಮತ್ತೆ ಮಹಾ ಪೂಜೆ, ಬಲಿ ಸುತ್ತು ನಡೆದು 39 ಕೋಳಿಗಳನ್ನು ದೇವಸ್ಥಾನದ ಹೊರಗೆ ನಾಲ್ಪೋಲುಗಳು ತಲೆ ಕೊಯ್ದು , ಒಂದು ನಡೆಯಲ್ಲಿ, ಒಂದು ಮಲರಾಯ,ಒಂದು ಪಿಲಿಚಾಮುಂಡಿ ದೈವದ ಮುಂದೆ ಕೊಯ್ಯುವ ಚರ್ವ ಸೇವೆ ನಡೆಯುತ್ತದೆ. ಬಳಿಕ ಪ್ರಸಾದ ವಿತರಣೆ ನಡೆದು ದೇವಾಲಯದಲ್ಲಿ ಸಂಪ್ರೋಕ್ಷಣೆ, ಸ್ಥಳ ಶುದ್ದಿ, ಗಣಪತಿ ಹೋಮ, ಸಾನಿಧ್ಯ ಶುದ್ದಿ,ನವಕಪೂಜೆ, ಅಮೃತ ಪಡಿ , ಮಹಾಪೂಜೆ ಪ್ರಸಾದ ವಿತರಣೆ ನಡೆಯುತ್ತದೆ.
ನಂತರ ಕೊರಿಗುಂಟ ನಡೆದು 3 ದಿನಗಳ ಜೂಜಿಲ್ಲದ, ರಾತ್ರಿಯಲ್ಲಿಲ್ಲದ ವಿಶೇಷ ಕೋಳಿ ಅಂಕ ನಡೆದು 4ನೆ ದಿನ ಮಲರಾಯ ಪಿಲಿಚಾಮುಂಡಿ ನೇಮೋತ್ಸವ 5 ನೆ ದಿನ ಕೊರತಿಗೆ ನೇಮ ನಡೆದು ಜಾತ್ರೆಯು ಸಂಪನ್ನಗೊಳ್ಳುತ್ತದೆ. ಅಂತೂ ನಮ್ಮೂರಿಗೆ ಒಟ್ಟು 5 ದಿನದ ಜಾತ್ರೆಯ ಸಂಭ್ರಮದ ಆಯನ. ನೀವೂ ಬನ್ನಿ. ಮಾಹಿತಿ ನೀಡಿದ ಕೃಷ್ಣಯ್ಯ ವಿಟ್ಲ ಅರಮನೆ ಹಾಗೂ ಕುಂಡಕೋಳಿ ಶ್ರೀನಿವಾಸ ರೈ ಯವರಿಗೆ ಅಂತರಾಳದ ಕೃತಜ್ಞತೆಗಳು.




