ಎದೆ ಉರಿಯಿಂದ 4 ವರ್ಷದ ಬಾಲಕ ಮೃತ್ಯು
ಹಿರಿಯೂರು: ತನಗೆ “ಎದೆ ಉರಿಯುತ್ತಿದೆ” ಎಂದು ಪೋಷಕರಿಗೆ ತಿಳಿಸಿದ ಕೆಲವೇ ನಿಮಿಷಗಳಲ್ಲಿ 4 ವರ್ಷದ ಬಾಲಕನೊಬ್ಬ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಕೊನೆಯುಸಿರೆಳೆದಿರುವ ಅತ್ಯಂತ ಆಘಾತಕಾರಿ ಹಾಗೂ ದುರದೃಷ್ಟಕರ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆದಿದೆ.
ಹಿರಿಯೂರು ನಗರದ ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಅವರ ಪುತ್ರ ವೈಷ್ಣವ್ (4) ಮೃತಪಟ್ಟ ದುರ್ದೈವಿ ಬಾಲಕನಾಗಿದ್ದಾನೆ.
ಬಾಲಕ ವೈಷ್ಣವ್ ಮಂಗಳವಾರ ಎಂದಿನಂತೆ ಮನೆಯಲ್ಲಿದ್ದಾಗ ಸಡನ್ ಆಗಿ ತನಗೆ ತೀವ್ರ ಎದೆ ಉರಿ ಬರುತ್ತಿದೆ ಎಂದು ಹೆತ್ತ ಪೋಷಕರಿಗೆ ತಿಳಿಸಿದ್ದಾನೆ. ಮಗುವಿನ ಅಸ್ವಸ್ಥತೆಯನ್ನು ಕಂಡು ತೀವ್ರ ಗಾಬರಿಗೊಂಡ ಪೋಷಕರು, ತಕ್ಷಣವೇ ಆತನನ್ನು ಚಿಕಿತ್ಸೆಗಾಗಿ ಹಿರಿಯೂರಿನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ದುರದೃಷ್ಟವಶಾತ್ ಆಸ್ಪತ್ರೆಯ ಮೆಟ್ಟಿಲು ಹತ್ತುವಷ್ಟರಲ್ಲೇ ಬಾಲಕ ವೈಷ್ಣವ್ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ.
ಕೇವಲ 4 ವರ್ಷದ ಪುಟ್ಟ ಮಗು ಎದೆ ಉರಿ ಎಂದ ತಕ್ಷಣವೇ ಪ್ರಾಣ ಕಳೆದುಕೊಂಡಿರುವುದನ್ನು ಗಮನಿಸಿದರೆ, ಮಗುವಿಗೆ ಸಡನ್ ಆಗಿ ಭೀಕರ ಹೃದಯಾಘಾತ (ಹಾರ್ಟ್ ಅಟ್ಯಾಕ್) ಆಗಿರಬಹುದು ಎಂದು ಶಂಕಿಸಲಾಗಿದೆ.




