ಮಂಗಳೂರು: ತಲ್ವಾರ್ ಹಿಡಿದು ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್: ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ತಲ್ವಾರ್ ಹಿಡಿದು ನೃತ್ಯ ಮಾಡಿದ ರೀಲ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಬಂದರು ಜೆ.ಎಂ. ರೋಡ್ ನಿವಾಸಿ ಅಮೀರ್ ಸುಹೇಲ್ (28) ಮತ್ತು ಕಾವೂರು ಪಂಜಿಮೊಗರು ಉರುಂದಾಡಿ ಗುಡ್ಡೆ ನಿವಾಸಿ ಸುರೇಶ (29) ಬಂಧಿತ ಆರೋಪಿಗಳು.
ಡಿ.13 ರಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಖಾತೆಯಲ್ಲಿ “Suresh Psy” ಎಂಬ ಹೆಸರಿನ ಖಾತೆ ಹೊಂದಿರುವ ಸುರೇಶ ಎಂಬುವನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಅಮೀರ್ ಸುಹೇಲನು ತಲ್ವಾರ್ ಹಿಡಿದು ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಮೇಲೆ VIBES ಮತ್ತು ಬಿಳಿ ಬಣ್ಣದ ಹಾರ್ಟ್ ಗುರುತಿನ ಚಿಹ್ನೆಯೊಂದಿಗೆ ಸ್ಟೋರಿಗೆ ಹಾಕಲಾಗಿತ್ತು. ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಗೆ ಭಯ ಹುಟ್ಟಿಸುವ ಅಮೀರ್ ಸುಹೇಲ್ ಹಾಗೂ ಸುರೇಶ ಎಂಬುವವನ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ188/2025 ಕಲಂ. 352(2) ಭಾರತೀಯ ನ್ಯಾಯ ಸಂಹಿತೆ 2023 ಜೊತೆಗೆ 4, 25(1ಬಿ) ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ 66 ಐ.ಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳನ್ನು ಬಂಧಿಸಿ ರೀಲ್ಸ್ ಮಾಡಲು ಬಳಸಿದ ತಲ್ವಾರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಬಳಸಿದ ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.





