ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಗೊಳಿಸುವುದಾಗಿ ಪ್ರಚೋದನಕಾರಿ ಕಾಮೆಂಟ್ ಹಾಕಿದ್ದ ಆರೋಪಿಯ ಬಂಧನ
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಗೊಳಿಸುವುದಾಗಿ ಪ್ರಚೋದನಕಾರಿ ಕಾಮೆಂಟ್ ಮಾಡಿದ್ದ ವ್ಯಕ್ತಿಯನ್ನು ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 02-03-2026 ರಂದು ಇನ್‌ಸ್ಟಾಗ್ರಾಂನಲ್ಲಿ “Support madi bro Ullal masjid hathira bomb blast madthini” ಎಂಬುದಾಗಿ ಕಾಮೆಂಟ್ ಮಾಡಿ ಧರ್ಮಗಳ ನಡುವೆ ವೈರತ್ವ, ದ್ವೇಷ ಮತ್ತು ವೈಮನಸ್ಸು ಉಂಟುಮಾಡುವಂತೆ ಹಾಗೂ ಹಿಂಸೆಗೆ ಪ್ರಚೋದನೆ ನೀಡುವ ಉದ್ದೇಶದಿಂದ ಪೋಸ್ಟ್ ಮಾಡಿರುವ ಕುರಿತು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 41/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 196(2), 197(2), 299, 353(2) ಹಾಗೂ ಇತರ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ಉಳ್ಳಾಲ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ತ್ವರಿತ ಕ್ರಮ ಕೈಗೊಂಡು, 03-03-2026 ರಂದು ಪ್ರಕರಣದ ಆರೋಪಿ ಭಟ್ಕಳದ ಶಂಕರ್ ಮಸ್ತಪ್ಪ ಮೊಗೆರ್ (35) ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಮಂಗಳೂರು ನಗರದ 7ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಭರಿತ, ಪ್ರಚೋದನಕಾರಿ ಹಾಗೂ ಕಾನೂನು ವಿರೋಧಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.




