ಉಡುಪಿ: ಹಿರಿಯಡ್ಕದ ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ಇಬ್ಬರು ಪೊಲೀಸರ ಅಮಾನತು
ಉಡುಪಿ: ಹಿರಿಯಡ್ಕದ ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣದ ನಿರ್ವಹಣೆಯಲ್ಲಿ ಕರ್ತವ್ಯಲೋಪ ಎಸಗಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಸ್ತು ಕ್ರಮ ಕೈಗೊಂಡಿದ್ದಾರೆ.
ಪ್ರಕರಣದ ಕುರಿತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ನಡೆಸಿದ ವಿಚಾರಣೆಯ ವರದಿ ಆಧರಿಸಿ ಹಿರಿಯಡ್ಕ ಪೊಲೀಸ್ ಠಾಣೆಯ ಪಿಎಸ್‌ಐ ಅವರನ್ನು ಪಶ್ಚಿಮ ವಲಯ ಡಿಐಜಿ ಕಚೇರಿಗೆ ಲಗತ್ತಿಸಲಾಗಿದೆ . ಇದರ ಜೊತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆಯಲ್ಲಿದ್ದ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹರಿರಾಮ್ ಶಂಕರ್ ಶುಕ್ರವಾರ (ನ.6) ತಿಳಿಸಿದ್ದಾರೆ.
ಪ್ರದೀಪ್ ಪೂಜಾರಿ ಅವರ ಮೇಲೆ ಹಲ್ಲೆ ನಡೆದ ಬಳಿಕ ಅವರು ನೀಡಿದ್ದ ದೂರಿನ ಮೇರೆಗೆ ವಾಗಿ ಎಫ್‌ಐಆರ್ (FIR) ದಾಖಲಿಸುವ ಬದಲು ಕೇವಲ ಎನ್‌ಸಿಆರ್ (Non-Cognizable) ಪ್ರಕರಣ ದಾಖಲಿಸಿಕೊಂಡಿದ್ದ ಹಿರಿಯಡ್ಕ ಠಾಣೆಯ ಪಿಎಸ್‌ಐ ವಿರುದ್ಧ ಈ ಹಿಂದೆಯೇ ಆಂತರಿಕ ವಿಚಾರಣೆ ಆರಂಭಿಸಲಾಗಿತ್ತು. ಇದೀಗ ಹೆಚ್ಚುವರಿ ಎಸ್ಪಿ ಸಲ್ಲಿಸಿದ ತನಿಖಾ ವರದಿಯ ಆಧಾರದಲ್ಲಿ ಪಶ್ಚಿಮ ವಲಯ ಡಿಐಜಿ ಕಚೇರಿಗೆ ಲಗತ್ತಿಸಿ, ಇಲಾಖಾ ಶಿಸ್ತು ಕ್ರಮ ಜರುಗಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಪ್ರದೀಪ್ ಪೂಜಾರಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಲ್ಲಿಸಿದ ವರದಿಯಲ್ಲಿ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯ ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಇವರ ವಿರುದ್ಧವೂ ಮುಂದಿನ ಇಲಾಖಾ ತನಿಖೆ ಮುಂದುವರಿಯಲಿದೆ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ಪ್ರದೀಪ್ ಪೂಜಾರಿ ಸಾವಿನ ಪ್ರಕರಣದಲ್ಲಿ ಆರಂಭದಿಂದಲೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಿವಿಧ ಸಂಘಟನೆಗಳು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು. ಸಾರ್ವಜನಿಕರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಆಂತರಿಕ ತನಿಖೆ ನಡೆಸಿ ಈ ಕ್ರಮ ಜರುಗಿಸಲಾಗಿದೆ.




