ಉಡುಪಿ: ಅಕ್ರಮ ವಲಸೆ ಪ್ರಕರಣ: 10 ಮಂದಿ ಬಾಂಗ್ಲಾ ಪ್ರಜೆಗಳಿಗೆ ಜೈಲು ಶಿಕ್ಷೆ ಮತ್ತು ದಂಡ
ಉಡುಪಿ: ಮಲ್ಪೆ ಠಾಣೆಯ ಪೊಲಿಸರು ಬಂಧಿಸಿದ್ದ ಹತ್ತು ಮಂದಿ ಬಾಂಗ್ಲಾದೇಶದ ಪ್ರಜೆಗಳಿಗೆ ಉಡುಪಿ ನ್ಯಾಯಾಲಯವು ಎರಡು ವರ್ಷ ಸಜೆ ಹಾಗೂ ತಲಾ ₹ 10 ಸಾವಿರ ದಂಡ ವಿಧಿಸಿದೆ.
ಬಾಂಗ್ಲಾ ದೇಶದ ಪ್ರಜೆಗಳಾದ ಹಕೀಮ್ ಅಲಿ, ಸುಜೋನ್ ಎಸ್.ಕೆ., ಇಸ್ಮಾಯಿಲ್ ಎಸ್.ಕೆ, ಕರೀಮ್ ಎಸ್.ಕೆ., ಸಲಾಂ ಎಸ್.ಕೆ., ರಾಜಿಕುಲ್ ಎಸ್.ಕೆ., ಮೊಹಮ್ಮದ್ ಸೋಜಿಬ್, ರಿಮೂಲ್, ಮೊಹಮ್ಮದ್ ಇಮಾಮ್ ಶೇಖ, ಮೊಹಮ್ಮದ್ ಜಹಾಂಗಿರ ಆಲಂ ಶಿಕ್ಷೆಗೆ ಒಳಗಾದವರು.
2024ರ ಅ.11ರಂದು ಸಂಜೆ ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ 7 ಮಂದಿ ಅನುಮಾನಸ್ಪದವಾಗಿ ಲಗೇಜ್ ಸಮೇತ ಒಡಾಡುತ್ತಿರುವುದನ್ನು ಕಂಡು ಅನುಮಾನಗೊಂಡು ಮಲ್ಪೆ ಪೊಲೀಸರು ವಿಚಾರಿಸಿದ್ದರು. ಆಗ ಇವರೆಲ್ಲ ಭಾರತ ದೇಶದ ಯಾವುದೇ ಅನುಮತಿ ದಾಖಲೆಗಳನ್ನು ಪಡೆಯದೇ ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್ ದಾಖಲೆಗಳನ್ನು ಸೃಷ್ಟಿಸಿ, ಬಾಂಗ್ಲಾದೇಶದಿಂದ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಹೂಡೆಗೆ ಬಂದಿರುವುದು ತಿಳಿದುಬಂತು.
ಅದರಂತೆ ಬಾಂಗ್ಲಾ ದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದಿರುವ ಇವರನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಆಗಿನ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರು ನಡೆಸಿದ್ದು, ಉಳಿದ 3 ಮಂದಿ ಅಕ್ರಮ ವಲಸಿಗರನ್ನು ಬಂಧಿಸಿದ್ದರು. ಒಟ್ಟು 10 ಮಂದಿ ಬಾಂಗ್ಲಾ ದೇಶದಿಂದ ಅಕ್ರಮವಾಗಿ ಉಡುಪಿಗೆ ಬಂದ ಆರೋಪಿಗಳ ವಿರುದ್ದ ಉಡುಪಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 10 ಮಂದಿ ಆರೋಪಿಗಳಿಗೆ 2 ವರ್ಷಗಳ ಕಾಲ ಜೈಲುಶಿಕ್ಷೆ ಮತ್ತು ತಲಾ 10,000ರೂ. ದಂಡವನ್ನು ವಿಧಿಸಿ ಆದೇಶಿಸಿದೆ.




