ಇರಾನ್ ಪರಮಾಣು ನೆಲೆಗಳ ಮೇಲೆ ಅಮೆರಿಕ ವೈಮಾನಿಕ ದಾಳಿ: ಮೂರು ಪರಮಾಣು ತಾಣಗಳ ಮೇಲೆ ದಾಳಿ
ಟೆಹ್ರಾನ್: ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಸಂಘರ್ಷಕ್ಕೆ ಅಮೆರಿಕವು ಅಧಿಕೃತವಾಗಿ ಪ್ರವೇಶ ಕೊಟ್ಟಿದೆ. ಇರಾನ್ ನ ಪರಮಾಣು ನೆಲೆಗಳ ಮೇಲೆ ಅಮೆರಿಕವು ವೈಮಾನಿಕ ದಾಳಿ ನಡೆಸಿದೆ ಎಂದು Aljazeera ವರದಿ ಮಾಡಿದೆ.
ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಇರಾನಿನ ಪರಮಾಣು ನೆಲೆಗಳ ಮೇಲೆ ಅಮೆರಿಕವು ಅತ್ಯಂತ ಯಶಸ್ವಿಯಾಗಿ ದಾಳಿಗಳನ್ನು ನಡೆಸಿದೆ.
ಎಲ್ಲಾ ವಿಮಾನಗಳು ಈಗ ಇರಾನಿನ ವಾಯುಪ್ರದೇಶದಿಂದ ಹೊರಗಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಹೇಳಿದ್ದಾರೆ.
“ಇರಾನ್‌ನಲ್ಲಿರುವ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಮೂರು ಪರಮಾಣು ತಾಣಗಳ ಮೇಲೆ ನಾವು ನಮ್ಮ ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದ್ದೇವೆ. ನಮ್ಮ ಎಲ್ಲಾ ವಿಮಾನಗಳು ಈಗ ಇರಾನ್ ವಾಯುಪ್ರದೇಶದ ಹೊರಗೆ ಸುರಕ್ಷಿತವಾಗಿವೆ”, ಎಂದು ಟ್ರಂಪ್ ಅವರು ಟ್ರೂತ್ ಸೋಷಿಯಲ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಪ್ರಾಥಮಿಕ ತಾಣವಾದ ಫೋರ್ಡೋದಲ್ಲಿ ಪೂರ್ಣ ಪ್ರಮಾಣದಲ್ಲಿ ಬಾಂಬ್ ದಾಳಿ ಮಾಡಲಾಗಿದೆ. ಎಲ್ಲಾ ವಿಮಾನಗಳು ಸುರಕ್ಷಿತವಾಗಿ ವಾಪಸ್ ನೆಲೆಗಳಿಗೆ ಹೋಗುತ್ತಿವೆ. ನಮ್ಮ ಅಮೆರಿಕದ ಮಹಾನ್ ಯೋಧರಿಗೆ ಅಭಿನಂದನೆಗಳು. ಈ ರೀತಿ ಕಾರ್ಯಾಚರಣೆ ಮಾಡಬಹುದಾದ ಮತ್ತೊಂದು ಸೇನೆಯು ಜಗತ್ತಿನಲ್ಲಿ ಇಲ್ಲ. ಇದು ಶಾಂತಿಯ ಸಮಯ! ಈ ಬೆಳವಣಿಗೆಯ ಬಗ್ಗೆ ನೀವು ಗಮನ ಹರಿಸಿದ್ದಕ್ಕಾಗಿ ಧನ್ಯವಾದಗಳು,” ಎಂದು ಅವರು ಉಲ್ಲೇಖಿಸಿದ್ದಾರೆ.





