ಐಪಿಎಲ್ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ತಂಡವನ್ನು ಬಗ್ಗುಬಡಿದು ಫೈನಲ್ ಪ್ರವೇಶಿಸಿದ ಪಂಜಾಬ್: 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ 11 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ ಪಂಜಾಬ್
ಐಪಿಎಲ್ನ ಕ್ವಾಲಿಫೈಯರ್-2 ಪಂದ್ಯದಲ್ಲಿ ಪ್ರಾಬಲ್ಯ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ 11 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದೆ. ಮುಂಬೈ ಇಂಡಿಯನ್ಸ್ ನೀಡಿದ್ದ 204 ರನ್ಗಳ ಗುರಿಯನ್ನ 5 ವಿಕೆಟ್ ಕಳೆದುಕೊಂಡು 19 ಓವರ್ಗಳಲ್ಲಿ ತಲುಪುವ ಮೂಲಕ ಪಂಜಾಬ್ ಕಿಂಗ್ಸ್ ಫೈನಲ್ ಪ್ರವೇಶಿಸಿತು. ಬಲಿಷ್ಠ ಮುಂಬೈ ಬೌಲಿಂಗ್ ದಾಳಿಯನ್ನ ಪುಡಿಗಟ್ಟಿದ ನಾಯಕ ಶ್ರೇಯಸ್ ಅಯ್ಯರ್ ಅಜೇಯ 87 ರನ್ಗಳಿಸಿ ಗೆಲುವಿನ ರೂವಾರಿಯಾದರು.
ಮುಂಬೈ ನೀಡಿದ್ದ 204 ರನ್ಗಳ ಗುರಿಯನ್ನ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಮುಂಬೈನಂತೆಯೇ ಆರಂಭದಲ್ಲೇ ಆಘಾತ ಅನುಭವಿಸಿತು. 3ನೇ ಓವರ್ನಲ್ಲಿ ಬೌಲ್ಟ್ ಬೌಲಿಂಗ್ನಲ್ಲಿ ಪ್ರಭಸಿಮ್ರನ್ ಸಿಂಗ್ 9 ಎಸೆತಗಳಲ್ಲಿ 6 ರನ್ಗಳಿಸಿ ಟೋಪ್ಲಿಗೆ ಕ್ಯಾಚ್ ನೀಡಿ ಔಟ್ ಆದರು. ಆದರೆ 2ನೇ ವಿಕೆಟ್ಗೆ ಪ್ರಿಯಾಂಶ್ ಆರ್ಯ ಹಾಗೂ ಜೋಶ್ ಇಂಗ್ಲಿಸ್ ಕೇವಲ 18 ಎಸೆತಗಳಲ್ಲಿ 42 ರನ್ ಸೇರಿಸಿದರು. ಆದರೆ ಪವರ್ ಪ್ಲೇ ಮುಗಿಯುವುದರೊಳಗೆ 10 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 20 ರನ್ಗಳಿಸಿದ್ದ ಆರ್ಯ ಅಶ್ವನಿ ಕುಮಾರ್ ಬೌಲಿಂಗ್ನಲ್ಲಿ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿ ಔಟಾದರು.
ಆರ್ಯ ವಿಕೆಟ್ ಬೆನ್ನಲ್ಲೇ ಜೋಶ್ ಇಂಗ್ಲಿಸ್ ಕೂಡ ಔಟಾದರು. 21 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ 38 ರನ್ಗಳಿಸಿ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಔಟ್ ಆದರು. ಆದರೆ 4ನೇ ವಿಕೆಟ್ಗೆ ಒಂದಾದ ನಾಯಕ ಶ್ರೇಯಸ್ ಅಯ್ಯರ್ ಮತ್ತು ನೇಹಾಲ್ ವಧೇರಾ ಮುಂಬೈ ಬೌಲರ್ಗಳನ್ನ ಬೆಂಡೆತ್ತಿದರು. ಈ ಇಬ್ಬರು ಆಟಗಾರರು 47 ಎಸೆತಗಳಲ್ಲಿ 84 ರನ್ಗಳ ಜೊತೆಯಾಟ ನಡೆಸಿ ಮುಂಬೈ ಕೈಯಿಂದ ಗೆಲುವನ್ನ ಕಸಿದುಕೊಳ್ಳುವ ಯತ್ನ ಮಾಡಿದ್ದರು
ಆದರೆ ಈ ಹಂತದಲ್ಲಿ ಬೌಲಿಂಗ್ ಇಳಿದ ಅಶ್ವನಿ ಕುಮಾರ್ 29 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ಗಳ ಸಹಿತ 48 ರನ್ಗಳಿಸಿದ್ದ ವಧೇರಾ ವಿಕೆಟ್ ಪಡೆದಯ ಬ್ರೇಕ್ ನೀಡಿದರು. ಇವರ ಬೆನ್ನಲ್ಲೇ ಫಿನಿಶರ್ ಶಶಾಂಕ್ ಸಿಂಗ್ ಸಿಂಗಲ್ ಕದಿಯುವ ಯತ್ನದಲ್ಲಿ ಕೇವಲ 2 ರನ್ಗಳಿಸಿ ರನ್ ಔಟ್ ಆದರು
ಫಿನಿಶ್ ಮಾಡಿದ ಅಯ್ಯರ್
ಆದರೆ ನಾಯಕ ಶ್ರೇಯಸ್ ಅಯ್ಯರ್ 41 ಎಸೆತಗಳಲ್ಲಿ 5 ಬೌಂಡರಿ, 8 ಸಿಕ್ಸರ್ಗಳ ಸಹಿತ ಅಜೇಯ 87 ರನ್ಗಳಿಸಿ ತಂಡವನ್ನು ಇನ್ನು 6 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗಡಿ ದಾಟಿಸಿದರು. ಕೊನೆಯ 2 ಓವರ್ಗಳಲ್ಲಿ 23 ರನ್ಗಳ ಅಗತ್ಯವಿತ್ತು. ಆದರೆ ಶ್ರೇಯಸ್ ಅಯ್ಯರ್ ತಾವೊಬ್ಬರೆ 19ನೇ ಓವರ್ನಲ್ಲಿ 4 ಸಿಕ್ಸರ್ ಸಿಡಿಸಿ ತಂಡವನ್ನು ಫೈನಲ್ ಪ್ರವೇಶಿಸುವಂತೆ ಮಾಡಿದರು.
ಚೊಚ್ಚಲ ಟ್ರೋಫಿಗಾಗಿ ಆರ್ಸಿಬಿ ವಿರುದ್ಧ ಸೆಣಸಾಟ
ಬಲಿಷ್ಟ ಮುಂಬೈ ಇಂಡಿಯನ್ಸ್ ವಿರುದ್ದ 5 ವಿಕೆಟ್ಗಳ ರೋಚಕ ಜಯ ಸಾಧಿಸಿದ ಪಂಜಾಬ್ ಕಿಂಗ್ಸ್ ತಂಡ ಫೈನಲ್ನಲ್ಲಿ ಜೂನ್ 3ರಂದು ಆರ್ಸಿಬಿ ವಿರುದ್ಧ ಚೊಚ್ಚಲ ಟ್ರೋಫಿಗಾಗಿ ಕಾದಾಡಲಿದೆ. ಯಾರೇ ಗೆದ್ದರು ಇದು ಪ್ರಥಮ ಟ್ರೋಫಿಯಾಗಲಿದೆ. ಆರ್ಸಿಬಿ 2016ರ ಬಳಿಕ ಫೈನಲ್ ಪ್ರವೇಶಿಸಿದರೆ, ಇತ್ತ ಪಂಜಾಬ್ 2014ರ ಬಳಿಕ ಫೈನಲ್ ಪ್ರವೇಶಿಸಿದೆ.





