ಸುಬ್ರಹ್ಮಣ್ಯ: ವಿವಾದಾತ್ಮಕ ಜಾಗ ಮತ್ತೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸುಪರ್ದಿಗೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸಂಬಂಧಿಸಿದ ಜಾಗವೊಂದು ನ್ಯಾಯಾಲಯದ ಮೂಲಕ ಮತ್ತೆ ದೇವಾಲಯದ ಸುಪರ್ದಿಗೆ ಬಂದಿದ್ದು, ಅಲ್ಲಿದ್ದ ಕಟ್ಟಡದ ತೆರವು ಕಾರ್ಯಾಚರಣೆ ಶನಿವಾರ ನಡೆಯಿತು.
ಕಾಶಿಕಟ್ಟೆ ರಥಬೀದಿಯ ಮಧ್ಯೆ ಅಂಚೆ ಕಚೇರಿ ಮುಂಭಾಗದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಹಾಗೂ ಕುಂಞಕ್ಕ ಎಂಬುವರಿಗೆ ಜಾಗದ ತಕರಾರು ಇತ್ತು. ನ್ಯಾಯಾಲಯದ ತೀರ್ಪಿನ ಅನ್ವಯ ಸುಳ್ಯ ನ್ಯಾಯಾಲಯದ ಆದೇಶಿಕ ಜಾರಿಕಾರರು (ಅಮೀನ್) ಹಾಗೂ ನ್ಯಾಯಾಲಯದ ಸಿಬ್ಬಂದಿ ಸ್ಥಳವನ್ನು ದೇವಾಲಯಕ್ಕೆ ಹಸ್ತಾಂತರಿಸಿದರು.
ಜಾಗದಲ್ಲಿದ್ದ ಹಳೆಯ ಕಟ್ಟಡ ತೆರವು ಕಾರ್ಯಾಚರಣೆ ನಡೆಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ ಏಸುರಾಜ್, ಉದಯಕುಮಾರ್ ಕೆ.ಸಿ., ನೋಣಪ್ಪ ಕೆ., ಮಹೇಶ್‌ಕುಮಾರ್ ಎಸ್., ಭದ್ರತಾ ಸಿಬ್ಬಂದಿ, ಕಂದಾಯ ಇಲಾಖೆಯವರು ಭಾಗವಹಿಸಿದ್ದರು.