April 2, 2025

ಗುರುಪುರ: ಮೂಳೂರಿನಲ್ಲಿ ಅಕ್ರಮ ಮರಳುಗಾರಿಕೆ: 5 ಸೆಂಟ್ಸ್‌ ಜಾಗ ಮುಟ್ಟುಗೋಲು, 5 ಲಕ್ಷ ರೂ. ದಂಡ

0

ಮಂಗಳೂರು: ತಾಲೂಕಿನ ತಿರುವೈಲು, ಕಂದಾವರ ಗ್ರಾಮಗಳಲ್ಲಿ ಹಾದುಹೋಗುವ ಫಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಖಚಿತ ವರ್ತಮಾನದ ಮೇರೆಗೆ ಮಂಗಳೂರು ತಹಶೀಲ್ದಾರರ ನೇತೃತ್ವದಲ್ಲಿ ಇತ್ತೀಚೆಗೆ ದಾಳಿ ನಡೆದಿತ್ತು.

ದಾಳಿ ವೇಳೆ ಅಕ್ರಮ ಮರಳುಗಾರಿಕೆ ದೃಢಪಟ್ಟಿದ್ದು, ನದಿ ಪಕ್ಕದ ಕೆಲ ಕುಟುಂಬಗಳು ತಮ್ಮ ಜಮೀನಿನಲ್ಲಿ ರಸ್ತೆ ನಿರ್ಮಿಸಿ ಅಕ್ರಮ ಮರಳು ಸಾಗಾಟಕ್ಕೆ ಅನುವು ಮಾಡಿಕೊಟ್ಟು, ಅಕ್ರಮಕ್ಕೆ ಸಾಥ್ ನೀಡಿ, ರಸ್ತೆಗೆ ಗೇಟ್ ಅಳವಡಿಸಿದ್ದರು. ತಹಶೀಲ್ದಾರರ ದಾಳಿಯ ವೇಳೆ ಹಲವಾರು ದೋಣಿಗಳನ್ನೂ ಜಪ್ತಿಮಾಡಲಾಗಿತ್ತು.

ಮಾತ್ರವಲ್ಲದೆ ಅನಧಿಕೃತವಾಗಿ ಕೆಲವು ಜಮೀನುಗಳಲ್ಲಿ ದಾಸ್ತಾನು ಇರಿಸಿದ ಮರಳು ಪತ್ತೆಯಾಗಿತ್ತು. ಈ ಬಗ್ಗೆ ತಹಶೀಲ್ದಾರ್ ಅವರು ಮಂಗಳೂರು ಎ.ಸಿಯವರಿಗೆ ಮಾರ್ಚ್ 12ರಂದು ವರದಿ ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದರು.

 

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಪುರ ಹೋಬಳಿಯ ಮೂಳೂರಿನ ದೋಣಿಂಜಗುತ್ತು ಸುಬ್ಬಣ್ಣ ಶೆಟ್ಟಿ, ಸುಮತಿ ಶೆಟ್ಟಿ ಅವರ ಕುಟುಂಬದ 5 ಸೆಂಟ್ಸ್‌ ಜಾಗವನ್ನು ಮುಟ್ಟುಗೋಲು ಹಾಕಿಕೊಂಡು 5 ಲಕ್ಷ ರೂಪಾಯಿ ದಂಡ ವಿಧಿಸುವ ಬಗ್ಗೆ ನೋಟಿಸ್‌ ಜಾರಿಗೊಳಿಸಲಾಗಿದೆ.

ತಿರುವೈಲು ಗ್ರಾಮದ ಪ್ರೇಮಾ ಬಿ.ಶೆಟ್ಟಿಯವರಿಗೆ ಸಂಬಂದಿಸಿದ 27 ಸೆಂಟ್ಸ್‌ ಜಾಗ ಮುಟ್ಟುಗೋಲು ಹಾಕಿ ರೂಪಾಯಿ 10 ಲಕ್ಷ ದಂಡ, ಅಣ್ಣಪ್ಪ ಶೆಟ್ಟಿಯವರ 55 ಸೆಂಟ್ಸ್ ಜಾಗವನ್ನು ಮುಟ್ಟುಗೋಲು ಹಾಕಿಕೊಂಡು 15 ಲಕ್ಷ ರೂ., ಕೆ.ಮಂಜಯ್ಯ ಶೆಟ್ಟಿಯವರಿಗೆ ಸಂಬಂಧಿಸಿದ 12 ಸೆಂಟ್ಸ್ ಜಾಗ ಬಗ್ಗೆ 5 ಲಕ್ಷ ರೂ. ದಂಡ ವಿಧಿಸುವ ನೋಟಿಸ್ ಜಾರಿಗೊಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!