ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಹಾಡಹಗಲೇ ಕೊಲೆ: ಆರೋಪಿಯ ಬಂಧನ
ರಾಯಚೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಹಾಡಹಗಲೇ ನಡುರಸ್ತೆಯಲ್ಲಿ ಕೊಲೆ ಮಾಡಿರುವ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಲಿಂಗಸುಗೂರಿನ ಶಿಫಾ (24) ಹಾಗೂ ಆರೋಪಿಯನ್ನು ಮುಬಿನ್ ಎಂದು ಗುರುತಿಸಲಾಗಿದೆ.
ಲಿಂಗಸುಗೂರಿನಿಂದ ಕಾಲೇಜಿಗೆ ಬರುತ್ತಿದ್ದಳು. ಟೈಲ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸುಮಾರು 6 ವರ್ಷಗಳ ಹಿಂದೆ ಯುವತಿಗೆ ಪರಿಚಯವಾಗಿದ್ದ. ಆದರೆ ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯದ ಮಾತುಕತೆ ನಡೆದಿತ್ತು. ಇದನ್ನು ತಿಳಿದ ಯುವಕ ಲಿಂಗಸುಗೂರಿನಿಂದ ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಸಿಂಧನೂರಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಬಳಿಯೇ ಕುತ್ತಿಗೆಗೆ ಚಾಕು ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ.
ಬಳಿಕ ಯುವತಿ ಜೊತೆ ಮದುವೆ ನಿಶ್ಚಯವಾಗಿದ್ದ ಹುಡುಗನ ಚಪ್ಪಲಿ ಅಂಗಡಿಗೆ ನುಗ್ಗಿ ಗಲಾಟೆ ಮಾಡಿದ್ದಾನೆ. ಅಲ್ಲಿಂದ ಲಿಂಗಸೂಗುರು ಪೊಲೀಸರಿಗೆ ಶರಣಾಗಿದ್ದಾನೆ. ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.




