ರೊನಾಲ್ಡ್ ಮಾರ್ಟಿಸ್: ಸಾಧನೆಯ ಈ ಸರದಾರನಿಗೆ 50 ರ ಸಂಭ್ರಮ: ಹಸಿದವರ ಹೊಟ್ಟೆ ತಣಿಸಲು ವೆನ್ಲಾಕ್ ಕಾರುಣ್ಯ ಯೋಜನೆಗೆ ಒಂದು ತಿಂಗಳ ಪ್ರಾಯೋಜಕತ್ವ
![](https://prathidina.com/wp-content/uploads/2025/01/image_editor_output_image-1473147631-1738122987288-1024x681.jpg)
ಮಂಗಳೂರು: ಶ್ರೀ ರೊನಾಲ್ಡ್ ಮಾರ್ಟಿಸ್ ಅವರು ಇಂದು ಮರಳನಾಡು ದುಬೈನಲ್ಲಿ ಯಶಸ್ವೀ ಅನಿವಾಸಿ ಭಾರತೀಯ ಉದ್ಯಮಿ. ಇವರ ಜನ್ಮದಿನದ ಸಲುವಾಗಿ ಒಂದು ತಿಂಗಳ ಕಾಲ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ರೋಗಿಗಳ ಸಹವರ್ತಿಗಳಿಗೆ ರಾತ್ರಿಯ ಊಟ ಕೊಡುವ ಯೋಜನೆ ಹಮ್ಮಿಕೊಂಡಿದ್ದಾರೆ. ಎಂ.ಪ್ರೆಂಡ್ಸ್ ಆಶ್ರಯದಲ್ಲಿ ನೀಡಲಾಗುತ್ತಿರುವ ಈ ಕೊಡುಗೆಯ ಒಂದು ತಿಂಗಳ ವೆಚ್ಚವನ್ನು ವಹಿಸಿಕೊಂಡಿರುವ ರೊನಾಲ್ಡ್ ಮಾರ್ಟಿಸ್ ಅವರಿಗೆ ಎಂ.ಫ್ರೆಂಡ್ ಚಾರಿಟೇಬಲ್ ಟ್ರಸ್ಟ್ ಸಹಸ್ರಾರು ಹಸಿದ ಹೊಟ್ಟೆಗಳ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದೆ.
ಕಷ್ಟದಿಂದ ದುಡಿದು ಮೇಲೆ ಬಂದ ಈ ಯಶಸ್ವೀ ಸಾಧಕ ಮುನ್ನೇರಿದ ಕಥಾನಕ ರೋಚಕವಾಗಿದೆ. 1975 ಜನವರಿ 29 ರಂದು ಬಂಟ್ವಾಳ ತಾಲೂಕಿನ ಸಜೀಪದ ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಇವರು ಸಜೀಪ ಮೂಡ ಹಾಗೂ ಸಜೀಪ ನಡುವಿನಲ್ಲಿ ಶಿಕ್ಷಣ ಮುಗಿಸಿ 1994 ರಲ್ಲಿ ತನ್ನ ಅಣ್ಣನ ಬಿಸ್ನೆಸ್ ಗೆ ಸಹಾಯಕನಾಗಿ ಪೂನಾಕ್ಕೆ ತೆರಳಿದ್ದರು. 1998 ರಲ್ಲಿ ಪುನಃ ಮಂಗಳೂರಿಗೆ ಮರಳಿ ಸೈಂಟ್ ಅಂತೋನಿ ಟ್ರಾನ್ಸ್ ಪೋರ್ಟ್ ಎಂಬ ಬಿಸ್ನೆಸ್ ಸ್ಥಾಪಿಸಿದರು. ಆ ಬಿಸ್ನೆಸ್ ಹಸಿರಾಗದ ಕಾರಣ 2004 ರಲ್ಲಿ ದುಬೈಗೆ ತೆರಳಿ ಅಲ್ಲಿನ Rak Ceramic ಕಂಪೆನಿಯಲ್ಲಿ ಸಾಮಾನ್ಯ ಮಟ್ಟದ ಒಂದು ಉದ್ಯೋಗದಲ್ಲಿ ತೊಡಗಿಕೊಂಡರು. ನಂತರ ಅಮೆರಿಕನ್ ಕಂಪೆನಿ Rak Laticrite ಗೆ ಸೇರಿದ್ದ ಇವರು ಬುರ್ಜ್ ಅಲ್ ಖಲೀಫಾದ ಕನ್ಸ್ಟ್ರಕ್ಷನ್ ಕೆಲಸದಲ್ಲಿ ಕೂಡಾ ದುಡಿದಿದ್ದರು. ದಣಿವರಿಯದ ಆ ದುಡಿಮೆಗಾರ ಯುವಕನಿಗೆ ಜೀವನದಲ್ಲಿ ಮುನ್ನೆಲೆಗೆ ಬರುವ ಒಂದು ಛಲವಿತ್ತು. ಎಷ್ಟೇ ಕಷ್ಟದಲ್ಲಿದ್ದರೂ ಮುಂದೊಂದು ದಿನ ತಾನು ಮೇಲೇರುತ್ತೇನೆ ಎಂಬ ಒಂದು ಆತ್ಮವಿಶ್ವಾಸ ಅವರಲ್ಲಿ ಮನೆಮಾಡಿಕೊಂಡಿತ್ತು. ಇದೇ ಆತ್ಮವಿಶ್ವಾಸದೊಂದಿಗೆ 2009 ರಲ್ಲಿ ಆ 34 ರ ತರುಣ ರೊನಾಲ್ಡ್ ಮಾರ್ಟಿಸ್ ದುಬೈನಲ್ಲಿ ಬರೀ ನಾಲ್ಕು ಮಂದಿ ಕಾರ್ಮಿಕರನ್ನಿಟ್ಟುಕೊಂಡು ಬ್ಲೂ ರಾಯಲ್ ಕಂಪೆನಿ ಆರಂಭಿಸಿದ್ದರು. ಈ ವಾಟರ್ ಪ್ರೂವಿಂಗ್ ಕಂಪೆನಿ ಒಂದೇ ವರ್ಷದೊಳಗೆ ನೂರು ಮಂದಿ ಕಾರ್ಮಿಕರಿರುವ ಮ್ಯಾನ್ ಪವರ್ ಕಂಪೆನಿಯಾಗಿ ಬೆಳೆದು ನಿಂತಿತು.
![](https://prathidina.com/wp-content/uploads/2025/01/image_editor_output_image-1471300589-17381230199748678197738165615878.jpg)
![](https://prathidina.com/wp-content/uploads/2025/01/img-20250129-wa00228391105524687094842.jpg)
ಛಲ, ಸತತ ಸಾಧನೆ, ಪ್ರಾಮಾಣಿಕತೆ, ಆತ್ಮ ವಿಶ್ವಾಸಗಳಿಂದ ಕಂಪೆನಿ ಮುನ್ನಡೆಸಿದ ಈ ಸಾಹಸೀ ಯುವಕ ಕೆಲವೇ ಅವಧಿಯೊಳಗೆ 1400 ಮಂದಿ ದುಡಿಯುವ ಬೃಹತ್ ಕಂಪೆನಿಯ ಯಜಮಾನರಾದರು!
ನಾಲ್ಕು ಜನರನ್ನಿಟ್ಟು ಆರಂಭಿಸಿದ್ದ ಬ್ಲೂ ರಾಯಲ್ ಕಂಪೆನಿಯು ರೊನಾಲ್ಡ್ ಮಾರ್ಟಿಸ್ ಎಂಬ ಕನಸುಗಾರ ಯುವಕನ ಬದುಕಿನ ದಿಕ್ಕನ್ನೇ ಬದಲಾಯಿಸಿತ್ತು.
ಕೋವಿಡ್ ಕಾಲದ ಪೆಟ್ಟು ಎಲ್ಲಾ ಕಂಪೆನಿಗಳಿಗೆ ಬಿದ್ದ ಹಾಗೆ ಇವರ ಕಂಪೆನಿಗೂ ಬಿದ್ದಿರುವುದರಿಂದ ಕಾರ್ಮಿಕರ ಸಂಖ್ಯೆ 800 ಕ್ಕೆ ಇಳಿದಿತ್ತು. ಇದೀಗ ಬ್ಲೂ ರಾಯಲ್ ಗ್ರೂಪ್ ಆಫ್ ಕಂಪೆನೀಸ್, ಬಿಲ್ಡಿಂಗ್ ಕನ್ಸ್ಟಕ್ಷನ್, ಲೇಬರ್ ಸಪ್ಲೈ, AC PI Duct ಫ್ರಾಬ್ರಿಕೇಶನ್ ಯೂನಿಟ್, ಮೈಂಟೆನೆನ್ಸ್ & ಟೆಕ್ನಿಕಲ್ ವರ್ಕ್ ಮುಂತಾದ ಬಹುವಿಧ ಕಂಪೆನಿಗಳ ಸಮುಚ್ಚಯವಾಗಿ ಇವರ ಕಂಪೆನಿ ಬೆಳೆದು ನಿಂತಿದೆ. ದುಬೈನಲ್ಲಿ ಪ್ರಧಾನ ಕಛೇರಿ ಹೊಂದಿದ್ದು ಅಬೂದಾಬಿ ಮತ್ತು ಶಾರ್ಜಾದಲ್ಲಿ ಉಪಕಛೇರಿಗಳಿವೆ.
ಪತ್ನಿ ಶ್ರೀಮತಿ ಕೋನ್ಲಿ ಮಾರ್ಟಿಸ್ ಹಾಗೂ ಮಗಳು ರಚೇಲ್ ಮತ್ತು ಪುತ್ರ ರಸ್ಸೆಲ್ ಜೊತೆಗೆ ದುಬೈನಲ್ಲಿ ವಾಸ್ತವ್ಯವಿರುವ ಇವರು ಮಂಗಳೂರು ಕುಲಶೇಖರ ಚರ್ಚ್ ಕಂಪೌಂಡ್ ನಲ್ಲಿ ಸ್ವಂತ ಮನೆ ಹೊಂದಿದ್ದಾರೆ.
ಯಶಸ್ವೀ ಉದ್ಯಮಿಯಾಗಿ ಶ್ರೀಮಂತಿಕೆಯ ಶಿಖರಾಗ್ರದಲ್ಲಿದ್ದರೂ ರೊನಾಲ್ಡ್ ಮಾರ್ಟಿಸ್ ಅವರು ತಾನು ನಡೆದು ಬಂದ ದಾರಿಯನ್ನು ಮರೆಯಲಿಲ್ಲ. ಸಿರಿವಂತಿಕೆಯು ಅವರ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ವಿದೇಶದಲ್ಲಿದ್ದರೂ ನಾಡುನುಡಿ ಸಂಸ್ಕೃತಿ ಮೇಲೆ ಅಭಿಮಾನ ಬಿಟ್ಟಿಲ್ಲ. ದುಬೈನಲ್ಲಿರುವ ಎಲ್ಲಾ ಕನ್ನಡ ಸಾಹಿತ್ಯಿಕ, ಸಾಂಸ್ಕೃತಿಕ ಸಂಘಟನೆಗಳಲ್ಲಿ ಇವರ ಸಕ್ರಿಯತೆ ಇದ್ದೇ ಇದೆ. ತನ್ನ ಜನ್ಮ ನಾಡಿನ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ರಂಗಗಳಲ್ಲಿ ಕೊಡುಗೆ ನೀಡುತ್ತಾ ಬಂದಿದ್ದಾರೆ. ಮೊಗರ್ನಾಡು ಚರ್ಚ್ ಗೆ ಸಂಪನ್ಮೂಲ ವ್ಯಕ್ತಿಯಾಗಿರುವ ಇವರು ಮೊಗರ್ನಾಡು ದೇವಮಾತಾ ಇಂಗ್ಲಿಷ್ ಮೀಡಿಯಂ ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಇದೆಲ್ಲದರ ಜೊತೆಗೆ ತುಳು ಕನ್ನಡ ಚಲನಚಿತ್ರ ನಿರ್ಮಾಪಕರೂ, ನಟರೂ ಕೂಡಾ ಆಗಿದ್ದಾರೆ. ಇವರ ವಿದೇಶದಲ್ಲಿನ ಕನ್ನಡ ಸಂಸ್ಕೃತಿಯ ಸೇವೆ ಹಾಗೂ ಯಶಸ್ವೀ ಉದ್ಯಮ ಹಾಗೂ ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ಈ ವರ್ಷ ದಕ್ಷಿಣ ಕನ್ನಡ ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಬಡವರಲ್ಲಿ ಅನುಕಂಪವಿರುವ ಹೃದಯ ವೈಶಾಲ್ಯದ ಈ ವಿನಯ ಸಂಪನ್ನ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿಮಾನ ಪುತ್ರರಾಗಿದ್ದಾರೆ. ಇವರಿಗೂ ಕುಟುಂಬಕ್ಕೂ ದೇವರು ಆಯುರಾರೋಗ್ಯವನ್ನೂ ಕ್ಷೇಮೈಶ್ವರ್ಯವನ್ನೂ ಇನ್ನಷ್ಟು ಹೆಚ್ವಿಸಿ ಕೊಡಲೆಂದು ಮನತುಂಬಿ ಪ್ರಾರ್ಥಿಸುತ್ತಾ ಇವರ 50ನೇ ಹುಟ್ಟು ಹಬ್ಬಕ್ಕೆ ಹೃದ್ಯ ಶುಭಾಶಯಗಳನ್ನು ಕೋರುತ್ತಿದ್ದೇವೆ.
-ರಶೀದ್ ವಿಟ್ಲ