ಕಣ್ಣೂರು: ಜೂನ್ ನಿಂದ ‘AIR KERALA’ ವಿಮಾನ ಕಾರ್ಯಾಚರಣೆ
ಕಣ್ಣೂರು: 2025ರ ದ್ವಿತೀಯಾರ್ಧದಲ್ಲಿ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಕೇರಳ ಕಾರ್ಯಾರಂಭ ಮಾಡಲಿದೆ ಎಂದು ಏರ್ ಕೇರಳ ಅಧ್ಯಕ್ಷ ಅಫಿ ಅಹ್ಮದ್ ಮತ್ತು ಕಣ್ಣೂರು ಏರ್‌ಪೋರ್ಟ್ ಎಂಡಿ ಸಿ.ದಿನೇಶ್ ಕುಮಾರ್ ಕಣ್ಣೂರು ವಿಮಾನ ನಿಲ್ದಾಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಣ್ಣೂರು ವಿಮಾನ ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಒಪ್ಪಂದ ಪತ್ರಕ್ಕೆ ಏರ್ ಕೇರಳ ಸಿಇಒ ಹರೀಶ್ ಕುಟ್ಟಿ ಮತ್ತು ಕಣ್ಣೂರು ಏರ್‌ಪೋರ್ಟ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಅಶ್ವಿನಿ ಕುಮಾರ್ ಸಹಿ ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಏರ್ ಕೇರಳ ಅಧ್ಯಕ್ಷ ಅಫಿ ಅಹ್ಮದ್ ಮತ್ತು ಕಣ್ಣೂರು ಏರ್‌ಪೋರ್ಟ್ ಎಂಡಿ ಸಿ.ದಿನೇಶ್ ಕುಮಾರ್ ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು.
ಪ್ರಾರಂಭಿಕ ಹಂತದಲ್ಲಿ ಕಣ್ಣೂರಿನಿಂದ ಹತ್ತಿರದ ವಿಮಾನ ನಿಲ್ದಾಣಗಳಿಗೆ ಏರ್ ಕೇರಳ ಸೇವೆ ಆರಂಭವಾಗಲಿದೆ. ನಂತರ ವಿಮಾನಗಳ ಲಭ್ಯತೆಗೆ ಅನುಗುಣವಾಗಿ ಹೆಚ್ಚಿನ ದೈನಂದಿನ ಸೇವೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಲಾಗಿದೆ.
ಮೊದಲ ಹಂತದಲ್ಲಿ ಎಟಿಆರ್ ವಿಮಾನಗಳನ್ನು ಬಳಸಿ ದೇಶೀಯ ಸೇವೆಗಳನ್ನು ಮತ್ತು ನಂತರ ಸಿಂಗಲ್-ಐಲ್ ಜೆಟ್ ವಿಮಾನಗಳನ್ನು ಬಳಸಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಸೇವೆಗಳನ್ನು ಆರಂಭಿಸಲು ಯೋಜಿಸಲಾಗಿದೆ. ಏರ್ ಕೇರಳದ ಯಶಸ್ಸು ಮತ್ತು ಬೆಳವಣಿಗೆಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಕಣ್ಣೂರು ಏರ್‌ಪೋರ್ಟ್ ಬದ್ಧವಾಗಿದೆ. ಈ ಸಹಭಾಗಿತ್ವ ಎರಡೂ ಕಡೆಗಳಿಗೂ ಲಾಭದಾಯಕವಾಗಲಿದೆ ಮತ್ತು ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಡಿಮೆ ದರದಲ್ಲಿ ಹೆಚ್ಚಿನ ಸಂಪರ್ಕ ಪಡೆಯಬೇಕೆಂಬ ಪ್ರದೇಶದ ಪ್ರಯಾಣಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸುತ್ತದೆ ಎಂದು ಅವರು ಹೇಳಿದರು.
ಏರ್ ಕೇರಳದೊಂದಿಗಿನ ಸಹಯೋಗದೊಂದಿಗೆ ಕಣ್ಣೂರು ಏರ್‌ಪೋರ್ಟ್ ಹೊಸ ವರ್ಷದಲ್ಲಿ ಭಾರಿ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ. 2018ರ ಡಿಸೆಂಬರ್‌ನಲ್ಲಿ ಕಾರ್ಯಾರಂಭ ಮಾಡಿದ ಕಣ್ಣೂರು ವಿಮಾನ ನಿಲ್ದಾಣ ಆರು ವರ್ಷಗಳಲ್ಲಿ 65 ಲಕ್ಷ ಪ್ರಯಾಣಿಕರನ್ನು ದಾಟಿದೆ. ಏರ್ ಕೇರಳ ಆರಂಭದೊಂದಿಗೆ ಉತ್ತರ ಮಲಬಾರ್ ಪ್ರವಾಸೋದ್ಯಮಕ್ಕೂ ಲಾಭವಾಗಲಿದೆ.




