ದೇವಸ್ಥಾನಗಳಲ್ಲಿ ಪುರುಷರ ಮೇಲ್ವಸ್ತ್ರ ತೆಗೆಯುವ ಪದ್ದತಿ ರದ್ದತಿಗೆ ಕ್ರಮ: ಕೇರಳ ಸಿಎಂ ಪಿಣರಾಯಿ ವಿಜಯನ್
ತಿರುವನಂತಪುರಂ: ಪುರುಷ ಭಕ್ತರು ದೇವಸ್ಥಾನಗಳಿಗೆ ಪ್ರವೇಶಿಸುವ ಮುನ್ನ ತಮ್ಮ ಮೈಮೇಲಿನ ಬಟ್ಟೆ ತಗೆಯುವ ಪದ್ದತಿಯನ್ನು ರದ್ದು ಮಾಡಲು ದೇವಸ್ವಂ ಮಂಡಳಿ ಯೋಜಿಸುತ್ತಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರು ಸ್ಥಾಪಿಸಿದ ಪ್ರಸಿದ್ಧ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರು ನೀಡಿದ ಹೇಳಿಕೆಯನ್ನು ಸಿಎಂ ಪಿಣರಾಯಿ ವಿಜಯನ್ ಅನುಮೋದಿಸಿದ್ದು, ದೇವಸ್ವಂ ಬೋರ್ಡ್ ಇದರ ಬಗ್ಗೆ ಕ್ರಮಕೈಗೊಳ್ಳಲಿದೆ ಎಂದಿದ್ದಾರೆ.
ಮಂಗಳವಾರ ಶಿವಗಿರಿ ತೀರ್ಥೋದ್ಭವ ಸಮಾವೇಶದಲ್ಲಿ ಮಾತನಾಡಿದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರು ದೇವಸ್ಥಾನದಲ್ಲಿ ಪುರುಷರು ತಮ್ಮ ಮೇಲಂಗಿಯನ್ನು ತೆಗೆಯುವುದು ಅನಿಷ್ಠ ಪದ್ದತಿ ಎಂದು ಕರೆದರು. ಅಲ್ಲದೆ ಈ ಪದ್ದತಿಯನ್ನು ನಿರ್ಮೂಲನೆ ಮಾಡಬೇಕೆಂದು ಕರೆ ನೀಡಿದರು.
ಇದೇ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಸ್ವಾಮಿಜಿ ಹೇಳಿದ ಮಾತನ್ನು ಸರಿ ಎಂದರು. ಅಲ್ಲದೆ ಈ ರೀತಿಯ ಸುಧಾರಣೆ ಸಾಮಾಜಿಕ ಸುಧಾರಣೆಯಲ್ಲಿ ಮಹತ್ವದ ಹೆಜ್ಜೆ ಎಂದರು.




