ಶಿವಮೊಗ್ಗ: ಬೈಕ್ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ತಿಳಿದು ಪತ್ನಿ ಆತ್ಮಹತ್ಯೆ

ಶಿವಮೊಗ್ಗ: ಬೈಕ್ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ತಿಳಿದು ಪತ್ನಿ ನೇಣಿಗೆ ಶರಣಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಮಂಜುನಾಥ್ (25), ಅಮೃತ (21) ಮೃತ ದುರ್ದೈವಿಗಳು. ಮಂಜುನಾಥ್‌ಗೆ ಮಂಗಳವಾರ ಶಿಕಾರಿಪುರದ ಬಳಿ ಅಪಘಾತವಾಗಿತ್ತು. ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಂಜುನಾಥ್ ಚಿಕಿತ್ಸೆ ಫಲಿಸದೇ ಇಂದು (ಬುಧವಾರ) ಮೃತಪಟ್ಟಿದ್ದಾರೆ.
ಪತಿ ಮಂಜುನಾಥ್ ಸಾವಿನಿಂದ ಮನನೊಂದ ಪತ್ನಿ ಅಮೃತ ಮನೆಗೆ ಬಂದು ತನ್ನ ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಜುನಾಥ್ ಹಾಗೂ ಅಮೃತ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ದಂಪತಿ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಹೊಸನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.